
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಅಂತಿಮ ಹಂತಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (121) ಹಾಗೂ ಟ್ರಾವಿಸ್ ಹೆಡ್ (163) ಅವರ ಶತಕದ ನೆರವಿನಿಂದ ಪ್ರಥಮ ಇನಿಂಗ್ಸ್ನಲ್ಲಿ 469 ರನ್ ಕಲೆಹಾಕಿತ್ತು.

ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಅಜಿಂಕ್ಯ ರಹಾನೆ (89) ಹಾಗೂ ಶಾರ್ದೂಲ್ ಠಾಕೂರ್ (51) ಅವರ ಅರ್ಧಶತಕಗಳೊಂದಿಗೆ 296 ರನ್ಗಳಿಗೆ ಆಲೌಟ್ ಆಗಿತ್ತು.

173 ರನ್ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ ತಂಡವು 8 ವಿಕೆಟ್ ನಷ್ಟಕ್ಕೆ 270 ರನ್ಗಳಿಸಿ ದ್ವಿತೀಯ ಇನಿಂಗ್ಸ್ನ್ನು ಡಿಕ್ಲೇರ್ ಮಾಡಿಕೊಂಡಿದೆ.

444 ರನ್ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 4ನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿದೆ. ಇನ್ನು ಗೆಲ್ಲಲು ಭಾರತಕ್ಕೆ ಬೇಕಿರುವುದು 280 ರನ್ಗಳು.

ಅಂದರೆ ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ ಮುಂದೆ 2 ಆಯ್ಕೆಗಳಿವೆ. ಅದರಲ್ಲಿನ ಮೊದಲ ಆಯ್ಕೆಯೆಂದರೆ ಒಟ್ಟು 90 ಓವರ್ಗಳಲ್ಲಿ 280 ರನ್ಗಳಿಸುವುದು. ಅಂದರೆ 540 ಎಸೆತಗಳಲ್ಲಿ ಟೀಮ್ ಇಂಡಿಯಾ 280 ರನ್ ಬಾರಿಸಬೇಕು. ಈ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಬಹುದು.

ಇನ್ನು ಇದರ ನಡುವೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೆ ಟೀಮ್ ಇಂಡಿಯಾ ಮುಂದಿರುವ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು. ಅಂದರೆ ಆಲೌಟ್ ಆಗದಂತೆ 5ನೇ ದಿನದಾಟದ ಅಂತ್ಯದವರೆಗೆ ಬ್ಯಾಟ್ ಮಾಡಬೇಕಾಗುತ್ತದೆ. ಈ ಮೂಲಕ ಸೋಲನ್ನು ತಪ್ಪಿಸಿಕೊಳ್ಳಬಹುದು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ...ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಈ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಜೊತೆ ಚಾಂಪಿಯನ್ ಪಟ್ಟವನ್ನು ಹಂಚಿಕೊಳ್ಳಬಹುದು. ಹೀಗಾಗಿ ಪಂದ್ಯ ಗೆಲ್ಲಲು ಸಾಧ್ಯವಾಗದಿದ್ದರೆ ಭಾರತ ತಂಡವು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಲಿದೆ.

ಮತ್ತೊಂದೆಡೆ ಆಸ್ಟ್ರೇಲಿಯಾ ತಂಡವು ಐದನೇ ದಿನದಾಟದಲ್ಲಿ 7 ವಿಕೆಟ್ ಉರುಳಿಸಿದರೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದೆ. ಹೀಗಾಗಿ ಅಂತಿಮ ದಿನದಾಟವು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.