WTC Points Table: ಗಾಬಾ ಟೆಸ್ಟ್ ಡ್ರಾನಲ್ಲಿ ಅಂತ್ಯ; ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಆದ ಬದಲಾವಣೆಗಳೇನು?
WTC Points Table: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಾಬಾ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾ ಆಗಿದೆ. ಆದಾಗ್ಯೂ ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಆಸೆ ಇನ್ನೂ ಜೀವಂತವಾಗಿದೆ. ಆದರೆ, ಮುಂದಿನ ಎರಡು ಪಂದ್ಯಗಳು ಭಾರತಕ್ಕೆ ಬಹುಮುಖ್ಯವಾಗಿದ್ದು, ಈ ಎರಡೂ ಪಂದ್ಯಗಳನ್ನು ಗೆಲ್ಲುವುದು ರೋಹಿತ್ ಪಡೆಗೆ ಅತ್ಯಗತ್ಯವಾಗಿದೆ.
1 / 6
ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಗೆಲುವಿಗೆ 275 ರನ್ಗಳ ಗುರಿ ಪಡೆದಿದ್ದ ಟೀಂ ಇಂಡಿಯಾಕ್ಕೆ ಗುರಿ ಬೆನ್ನಟ್ಟುವ ಅವಕಾಶವನ್ನು ವರುಣ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯದ ಐದನೇ ದಿನದಾಟವನ್ನೂ ಸಹ ಮಳೆಯಿಂದಾಗಿ ರದ್ದು ಮಾಡಬೇಕಾಯಿತು.
2 / 6
ಐದು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಸದ್ಯ ಮೂರು ಪಂದ್ಯಗಳ ಬಳಿಕ ಎರಡೂ ತಂಡಗಳು ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿವೆ. ಪಂದ್ಯ ರದ್ದಾದ ನಂತರವೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಟೀಂ ಇಂಡಿಯಾದ ಆಸೆ ಇನ್ನೂ ಹಾಗೆಯೇ ಉಳಿದಿದೆ.
3 / 6
ಗಾಬಾ ಟೆಸ್ಟ್ ರದ್ದಾದ ನಂತರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 4 ಅಂಕ ಪಡೆದಿವೆ. ಐಸಿಸಿ ನಿಯಮಗಳ ಪ್ರಕಾರ ಪಂದ್ಯ ರದ್ದಾದ ಬಳಿಕ ಎರಡೂ ತಂಡಗಳು ಸಮಾನ ಅಂಕ ಪಡೆಯುತ್ತವೆ. ಆ ಪ್ರಕಾರ ಈ ಪಂದ್ಯದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
4 / 6
ಆಂದರೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಮುಂದುವರೆದಿದ್ದರೆ, ಆಸ್ಟ್ರೇಲಿಯ ಎರಡನೇ ಹಾಗೂ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಗಾಬಾ ಟೆಸ್ಟ್‌ನ ನಂತರ ಆಸ್ಟ್ರೇಲಿಯಾ 106 ಮತ್ತು ಭಾರತ 114 ಅಂಕಗಳನ್ನು ಹೊಂದಿದೆ.
5 / 6
ಸದ್ಯಕ್ಕೆ ಬಾರ್ಡರ್ ಗವಾಸ್ಕರ್ ಟ್ರೋಫಿಯ 2 ಪಂದ್ಯಗಳು ಬಾಕಿ ಉಳಿದಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಏಕಾಂಗಿಯಾಗಿ ಫೈನಲ್‌ಗೆ ಲಗ್ಗೆ ಇಡಬೇಕಾದರೆ ಟೀಂ ಇಂಡಿಯಾ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ವೇಳೆ ಸರಣಿಯನ್ನು 3-1 ಅಂತರದಲ್ಲಿ ಟೀಂ ಇಂಡಿಯಾ ಗೆದ್ದುಕೊಂಡರೆ ಡಬ್ಲ್ಯುಟಿಸಿ ಫೈನಲ್‌ಗೆ ಟಿಕೆಟ್ ಪಡೆಯಲಿದೆ.
6 / 6
ಒಂದು ವೇಳೆ ಸರಣಿ 2-2ರಲ್ಲಿ ಅಂತ್ಯಗೊಂಡರೆ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಫಲಿತಾಂಶದ ಮೇಲೆ ಟೀಂ ಇಂಡಿಯಾ ಅವಲಂಬಿತವಾಗಬೇಕಾಗುತ್ತದೆ. ಈ ಸರಣಿಯಲ್ಲಿ, ಶ್ರೀಲಂಕಾ ತಂಡವು ಆಸ್ಟ್ರೇಲಿಯಾವನ್ನು ಮಣಿಸಿದರೆ ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಹಾದಿ ಸುಗಮವಾಗಲಿದೆ.
Published On - 2:59 pm, Wed, 18 December 24