
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು 280 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆಯಲು ಟೀಂ ಇಂಡಿಯಾ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? ಹಾಗೆಯೇ ರೋಹಿತ್ ಪಡೆ ಈಗ ಎಷ್ಟು ಪಂದ್ಯಗಳನ್ನು ಆಡಿದೆ? ಮುಂದೆ ಯಾವ್ಯಾವ ತಂಡಗಳ ವಿರುದ್ಧ ಸೆಣಸಾಡಲಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಗೆಲುವಿನ ನಂತರ ಟೀಂ ಇಂಡಿಯಾ 86 ರೇಟಿಂಗ್ ಅಂಕಗಳನ್ನು ಗಳಿಸಿದ್ದು, ತಂಡದ ಗೆಲುವಿನ ಶೇಕಡಾವಾರು 71.67 ಆಗಿದೆ.

ಇನ್ನು ಮೂರನೇ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಟೀಂ ಇಂಡಿಯಾ ಇದುವರೆಗೆ ವೆಸ್ಟ್ ಇಂಡೀಸ್ ತಂಡವನ್ನು 1-0 ಅಂತರದಲ್ಲಿ ಹಾಗೂ ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಸೋಲಿಸಿದೆ. ಇದೀಗ ಟೀಂ ಇಂಡಿಯಾ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 1-0 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ಪ್ರಸ್ತುತ ಬಾಂಗ್ಲಾದೇಶ ವಿರುದ್ಧ 1, ನ್ಯೂಜಿಲೆಂಡ್ ವಿರುದ್ಧ 3 ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಟೀಂ ಇಂಡಿಯಾ ಇದುವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ 1-1 ರಿಂದ ಸರಣಿಯನ್ನು ಡ್ರಾ ಮಾಡಿಕೊಂಡಿದೆ. ಉಳಿದಂತೆ ಭಾರತ ಯಾವ ಪಂದ್ಯವನ್ನು ಇದುವರೆಗೆ ಸೋತಿಲ್ಲ.

ಐಸಿಸಿ ವರದಿಯ ಪ್ರಕಾರ ಟೀಂ ಇಂಡಿಯಾ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಬೇಕಿಂದರೆ ಮುಂದಿನ 9 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದರಲ್ಲಿ ಭಾರತ ತನ್ನ ತವರು ನೆಲದಲ್ಲಿ ಬಾಂಗ್ಲಾದೇಶ ವಿರುದ್ಧ 1 ಮತ್ತು ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಆ ಬಳಿಕ ತಂಡವು ವಿದೇಶಿ ನೆಲದಲ್ಲಿ ಅಂದರೆ ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳನ್ನು ಆಡಬೇಕಾಗಿದೆ. ಫೈನಲ್‌ಗೆ ತಲುಪಲು ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ-2 ರಲ್ಲಿರಬೇಕು. ಹೀಗಾಗಿ ಭಾರತ 5 ಪಂದ್ಯ ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಂಡರೂ ಫೈನಲ್‌ಗೆ ಟಿಕೆಟ್ ಪಡೆಯಲಿದೆ.

ಇನ್ನು ಉಳಿದ ತಂಡಗಳ ಬಗ್ಗೆ ಹೇಳುವುದಾದರೆ... ಡಬ್ಲ್ಯುಟಿಸಿ ಫೈನಲ್‌ಗೆ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆಲ್ಲಬೇಕು ಅಥವಾ 3 ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು.

ಹಾಗೆಯೇ ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಉಳಿದ 8 ಪಂದ್ಯಗಳ ಪೈಕಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಬೇಕು ಅಥವಾ 5 ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು.