ಭಾರತ ಹಾಗೂ ಬಾಂಗ್ಲಾದೇಶ ನಡುವೆ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಆತಿಥೇಯ ರೋಹಿತ್ ಪಡೆ 280 ರನ್ಗಳ ಗೆಲುವು ದಾಖಲಿಸಿದೆ. ಗೆಲುವಿಗೆ 515 ರನ್ಗಳ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡ ಕೇವಲ 234 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದ ಬಳಿಕ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ.
ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಸೋಲಿನಿಂದಾಗಿ ಬಾಂಗ್ಲಾದೇಶ ತಂಡ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ನಷ್ಟ ಅನುಭವಿಸಿದ್ದು, ನೇರವಾಗಿ ಆರನೇ ಸ್ಥಾನಕಕ್ಕೆ ಕುಸಿದಿದೆ. ಮತ್ತೊಂದೆಡೆ, ಈ ಬೃಹತ್ ಗೆಲುವಿನೊಂದಿಗೆ ಟೀಂ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ.
ಪ್ರಸ್ತುತ, ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ 71.67 ಶೇಕಡಾ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 62.50 ಗೆಲುವಿನ ಶೇಕಡಾವಾರು ಹೊಂದಿರುವ ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನದಲ್ಲಿದೆ.
ಇನ್ನು ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಬಾಂಗ್ಲಾದೇಶ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ. 39.29 ಗೆಲುವಿನ ಶೇಕಡಾವಾರು ಹೊಂದಿರುವ ಬಾಂಗ್ಲಾದೇಶ ತಂಡ ಈ ಸರಣಿಯ ಆರಂಭಕ್ಕೂ ಮುನ್ನ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾಕ್ಕಿಂತ ಮೇಲಿತ್ತು. ಆದರೀಗ ಎರಡೂ ತಂಡಗಳಿಗಿಂತ ಕೆಳಕ್ಕೆ ಹೋಗಿದೆ.
2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್ ತಲುಪುವುದು ಖಚಿತ ಎಂದು ಪರಿಗಣಿಸಲಾಗಿದೆ. ಡಬ್ಲ್ಯುಟಿಸಿ ಫೈನಲ್ ರೇಸ್ನಲ್ಲಿ ಟೀಂ ಇಂಡಿಯಾ ಇನ್ನೂ ಒಂಬತ್ತು ಪಂದ್ಯಗಳನ್ನು ಆಡಬೇಕಾಗಿದೆ. ಈ ಪೈಕಿ ಬಾಂಗ್ಲಾದೇಶ ವಿರುದ್ಧ ಒಂದು ಪಂದ್ಯ ಬಾಕಿ ಉಳಿದಿದ್ದರೆ, ನ್ಯೂಜಿಲೆಂಡ್ ವಿರುದ್ಧ ಮೂರು ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು ಸರಣಿಗಳನ್ನು ತಂಡ ಆಡಬೇಕಿದೆ. ಈ ಒಂಬತ್ತು ಪಂದ್ಯಗಳ ಪೈಕಿ ಭಾರತ ತಂಡ ಆರು ಪಂದ್ಯಗಳನ್ನು ಗೆಲ್ಲಬೇಕಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರತಿ ಪಂದ್ಯವನ್ನು ಗೆಲ್ಲುವ ತಂಡವು 12 ಅಂಕಗಳನ್ನು ಪಡೆಯುತ್ತದೆ. ಒಂದು ವೇಳೆ ಉಭಯ ತಂಡಗಳ ನಡುವೆ ಪಂದ್ಯ ಸಮಬಲಗೊಂಡರೆ ಉಭಯ ತಂಡಗಳು ತಲಾ ಆರು ಅಂಕ ಪಡೆಯಲಿವೆ. ಡ್ರಾ ವೇಳೆ ಐಸಿಸಿ ಎರಡೂ ತಂಡಗಳಿಗೆ ತಲಾ ನಾಲ್ಕು ಅಂಕ ನೀಡುತ್ತದೆ.
ಆದಾಗ್ಯೂ, ಐಸಿಸಿ ಈಗ ನಿಯಮಗಳನ್ನು ಬದಲಾಯಿಸಿದ್ದು, ಅದರಂತೆ ತಂಡಗಳಿಗೆ ಅಂಕಗಳ ಆಧಾರದ ಮೇಲೆ ಶ್ರೇಯಾಂಕ ನೀಡುವ ಬದಲು ಅಂಕಗಳ ಶೇಕಡಾವಾರು ವ್ಯವಸ್ಥೆ (PCT) ಆಧಾರದ ಮೇಲೆ ಶ್ರೇಯಾಂಕ ನೀಡಲಾಗುತ್ತದೆ. ಆಸ್ಟ್ರೇಲಿಯಾ ತಂಡ ಪ್ರಸ್ತುತ ಹಾಲಿ ಚಾಂಪಿಯನ್ ಆಗಿದ್ದು, ಕಳೆದ ವರ್ಷ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಪ್ರಶಸ್ತಿಯನ್ನು ವಶಪಡಿಸಿಕೊಂಡಿತ್ತು.
Published On - 3:13 pm, Sun, 22 September 24