- Kannada News Photo gallery Cricket photos Team India records more wins than losses for first-time ever in Test history
Team India: ಟೆಸ್ಟ್‌ನಲ್ಲಿ ಸೋಲನ್ನೇ ಸೋಲಿಸಿದ ಟೀಮ್ ಇಂಡಿಯಾ
India vs Bangladesh: ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ನೀಡಿದ 515 ರನ್ಗಳನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು ಕೇವಲ 234 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆ 280 ರನ್ಗಳ ಗೆಲುವು ದಾಖಲಿಸಿದೆ.
Updated on:Sep 22, 2024 | 12:20 PM

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಟೆಸ್ಟ್‌ನಲ್ಲಿ ಸೋಲನ್ನೇ ಸೋಲಿಸಿರುವುದು ವಿಶೇಷ.

ಅಂದರೆ 1932 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಭಾರತ ತಂಡವು ಇದೇ ಮೊದಲ ಬಾರಿಗೆ ಸೋಲು-ಗೆಲುವುಗಳ ಅಂಕಿ ಅಂಶಗಳಲ್ಲಿ ಜಯದ ಸಂಖ್ಯೆಯನ್ನು ಹೆಚ್ಚಿಸಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಟೆಸ್ಟ್‌ನಲ್ಲಿ 178 ಗೆಲುವು ಕಂಡಿದ್ದರೆ, 178 ಪಂದ್ಯಗಳಲ್ಲಿ ಸೋಲನುಭವಿಸಿತ್ತು.

ಇದೀಗ ಬಾಂಗ್ಲಾದೇಶ್ ಪಡೆಯನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ 179ನೇ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಸೋಲನ್ನು ಹಿಂದಿಕ್ಕಿ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಅಲ್ಲದೆ ಈ ಟೆಸ್ಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ಕಂಡ ವಿಶ್ವದ 4ನೇ ಎನಿಸಿಕೊಂಡಿದೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದೆ. ಆಸೀಸ್ ಪಡೆಯು 414 ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ, 232 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಇನ್ನು ಈ ಸಾಧನೆ ಮಾಡಿದ ತಂಡಗಳಲ್ಲಿ 2ನೇ ಸ್ಥಾನದಲ್ಲಿ ಇಂಗ್ಲೆಂಡ್ (397 ಗೆಲುವು, 325 ಸೋಲು) ತಂಡವಿದ್ದರೆ, ನಂತರದ ಸ್ಥಾನದಲ್ಲಿ ಪಾಕಿಸ್ತಾನ್ (148ಗೆಲುವು, 144 ಸೋಲು) ತಂಡವಿದೆ.

ಇದೀಗ 179 ಗೆಲುವು ಹಾಗೂ 178 ಸೋಲುಗಳೊಂದಿಗೆ ಈ ಸಾಧನೆ ಮಾಡಿದ ನಾಲ್ಕನೇ ತಂಡವಾಗಿ ಟೀಮ್ ಇಂಡಿಯಾ ಹೊರಹೊಮ್ಮಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವು 200 ಗೆಲುವಿನತ್ತ ದಾಪುಗಾಲಿಟ್ಟಿದೆ.

1932 ರಿಂದ ಟೆಸ್ಟ್ ಕೆರಿಯರ್ ಆರಂಭಿಸಿರುವ ಭಾರತ ತಂಡವು ಈವರೆಗೆ 580 ಪಂದ್ಯಗಳನ್ನಾಡಿದೆ. ಈ ವೇಳೆ 179 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 178 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು 222 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಹಾಗೆಯೇ ಒಂದು ಪಂದ್ಯವು ಟೈನಲ್ಲಿ ಅಂತ್ಯ ಕಂಡಿದೆ. ಇದೀಗ 179 ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಮುಂಬರುವ ಸರಣಿಗಳ ಮೂಲಕ 21 ಜಯ ಸಾಧಿಸಿದರೆ ಟೆಸ್ಟ್‌ನಲ್ಲಿ ಇನ್ನೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ವಿಶ್ವದ ಮೂರನೇ ತಂಡ ಎನಿಸಿಕೊಳ್ಳಲಿದೆ.
Published On - 12:20 pm, Sun, 22 September 24
