
ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಟಾಪ್ ಆರ್ಡರ್ಗಳ ವೈಫಲ್ಯದ ನಡುವೆ ಟೊಂಕ ಕಟ್ಟಿ ಬ್ಯಾಟಿಂಗ್ ನಡೆಸುತ್ತಿರುವ ಯಶಸ್ವಿ ಜೈಸ್ವಾಲ್ ಭರವಸೆ ಮೂಡಿಸಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿದೆ. ಯಶಸ್ವಿ ಜೈಸ್ವಾಲ್ ಅಜೇಯ 179 ರನ್ ಕಲೆಹಾಕಿ ದ್ವಿಶತಕದ ಅಂಚಿನಲ್ಲಿದ್ದು, ಇಂದಿನ ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಇವರ ಜೊತೆ ಆರ್. ಅಶ್ವಿನ್ (5) ಕ್ರೀಸ್ನಲ್ಲಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್ಗಳಾಗಿ ಕಣಕ್ಕಿಳಿದ ಜೈಸ್ವಾಲ್ ಹಾಗೂ ರೋಹಿತ್ ಮೊದಲ ವಿಕೆಟ್ಗೆ 40 ರನ್ಗಳ ಜೊತೆಯಾಟ ಆಡಿದರು. ಚೆನ್ನಾಗಿಯೆ ಆಡುತ್ತಿದ್ದ ಹಿಟ್ಮ್ಯಾನ್ 14 ರನ್ ಗಳಿಸಿ ಔಟಾದರೆ ಶುಭ್ಮನ್ ಗಿಲ್ (34) ಆಟ ಹೆಚ್ಚುಹೊತ್ತು ನಡೆಯಲಿಲ್ಲ.

ಬಳಿಕ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ಆಡಿದರು. ಜೈಸ್ವಾಲ್ ಬಿರುಸಿನ ಆಟಕ್ಕೆ ಅಯ್ಯರ್ (27) ಉತ್ತಮ ಸಾಥ್ ನೀಡಿದರು. ಅಯ್ಯರ್ ನಿರ್ಗಮನದ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ರಜತ್ ಪಟಿದಾರ್ 32 ರನ್ ಕಲೆಹಾಕಿ ದುರಾದೃಷ್ಟಕರ ರೀತಿಯಲ್ಲಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ಅಕ್ಷರ್ ಪಟೇಲ್ 27 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸನ್ ಶ್ರೀಕರ್ ಭರತ್ ಬೇಡದ ಶಾಟ್ ಆಡಿ 17 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ಜೈಸ್ವಾಲ್ ದ್ವಿಶತಕದಂಚಿನಲ್ಲಿದ್ದು, 179 ರನ್ ಕಲೆಹಾಕಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಶೋಯೆಬ್ ಬಸೀರ್ ಹಾಗೂ ರೆಹಾನ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ಅನುಭವಿ ಬೇಗಿ ಜೇಮ್ಸ್ ಅಂಡರ್ಸನ್ ಹಾಗೂ ಕಳೆದ ಪಂದ್ಯದ ಹೀರೋ ಟಾಮ್ ಹಾರ್ಟ್ಲಿ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.