ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ (Yashasvi Jaiswal) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ವಿಶಾಖಪಟ್ಟಣಂ ಹಾಗೂ ರಾಜ್ಕೋಟ್ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ ಸಿಡಿಸಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ.
ಈ ಸಂಚಲನದೊಂದಿಗೆ ಯಶಸ್ವಿ ಜೈಸ್ವಾಲ್ ಟೆಸ್ಟ್ ಸರಣಿಯ ಹೊಸ ಸಿಕ್ಸರ್ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. ಅಂದರೆ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಇದೀಗ 22ರ ಹರೆಯದ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಹಿಟ್ಮ್ಯಾನ್ ಖ್ಯಾತಿ ರೋಹಿತ್ ಶರ್ಮಾ ಹೆಸರಿನಲ್ಲಿತ್ತು.
2019 ರಲ್ಲಿ ರೋಹಿತ್ ಶರ್ಮಾ ಸೌತ್ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬರೋಬ್ಬರಿ 19 ಸಿಕ್ಸ್ಗಳನ್ನು ಬಾರಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಟೀಮ್ ಇಂಡಿಯಾ ನಾಯಕನ ದಾಖಲೆಯನ್ನು ಸಹ ಆರಂಭಿಕ ಆಟಗಾರನೇ ಮುರಿದಿರುವುದು ವಿಶೇಷ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಇದುವರೆಗೆ 22 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಸರಣಿವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಎಂಬ ವರ್ಲ್ಡ್ ರೆಕಾರ್ಡ್ ಅನ್ನು ಯಶಸ್ವಿ ತನ್ನದಾಗಿಸಿಕೊಂಡಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್ನ ಶಿಮ್ರಾನ್ ಹೆಟ್ಮೆಯರ್. 2019 ರಲ್ಲಿ ಬಾಂಗ್ಲಾದೇಶ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹೆಟ್ಮೆಯರ್ 15 ಸಿಕ್ಸ್ ಬಾರಿಸಿ ಅಬ್ಬರಿಸಿದ್ದರು.
ಹಾಗೆಯೇ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಒಟ್ಟು 15 ಸಿಕ್ಸ್ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದರು.
ಇದೀಗ ಈ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿರುವ ಯಶಸ್ವಿ ಜೈಸ್ವಾಲ್ ಟೆಸ್ಟ್ ಸರಣಿಯ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಮುಂದಿನ 2 ಪಂದ್ಯಗಳ ಮೂಲಕ ಈ ಸಿಕ್ಸ್ಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವುದನ್ನು ನಿರೀಕ್ಷಿಸಬಹುದು.