
2021ನೇ ವರ್ಷವು ಎರಡು ಐಸಿಸಿ ಟೂರ್ನಿಗಳಿಗೆ ಸಾಕ್ಷಿಯಾಗಿತ್ತು. ಈ ಎರಡೂ ಟೂರ್ನಿಗಳಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಭಾರತ ಮುಗ್ಗರಿಸಿ ನಿರಾಸೆ ಮೂಡಿಸಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ಸೋತರೆ, ಟಿ20 ವಿಶ್ವಕಪ್ನಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇದಾಗ್ಯೂ ಈ ಬಾರಿ ಕಡಿಮೆ ಟಿ20 ಪಂದ್ಯಗಳನ್ನು ಗೆದ್ದಂತಹ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ವಿಶೇಷ.

ಐಸಿಸಿಯ ಟಾಪ್-6 ಶ್ರೇಯಾಂಕ ತಂಡಗಳ ಈ ವರ್ಷದ ಒಟ್ಟಾರೆ ಟಿ20 ಪ್ರದರ್ಶನವನ್ನು ನೋಡುವುದಾದರೆ, ಪಾಕಿಸ್ತಾನವು 2021 ರಲ್ಲಿ ಗರಿಷ್ಠ 29 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 20 ಪಂದ್ಯಗಳನ್ನು ಗೆಲ್ಲುವ ಮೂಲಕ ಅತೀ ಹೆಚ್ಚು ಪಂದ್ಯ ಗೆದ್ದ ತಂಡ ಎನಿಸಿಕೊಂಡಿದೆ. ಅಂದರೆ ಪಾಕಿಸ್ತಾನ ಈ ವರ್ಷ ಶೇಕಡಾ 77 ರಷ್ಟು ಟಿ20 ಪಂದ್ಯಗಳನ್ನು ಗೆದ್ದಿದೆ. ಟಿ20 ಶ್ರೇಯಾಂಕದಲ್ಲಿರುವ ಉಳಿದ ಟಾಪ್-5 ತಂಡಗಳಿಗಿಂತ ಹೆಚ್ಚು ಪಂದ್ಯ ಗೆದ್ದ ಶ್ರೇಯಸ್ಸು ಪಾಕಿಸ್ತಾನಕ್ಕೆ ಸಲ್ಲುತ್ತದೆ. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿದರೂ ಈ ಬಾರಿ ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ ಎಂಬುದು ವಿಶೇಷ.

ಈ ವರ್ಷ ಪಾಕಿಸ್ತಾನದ ನಂತರ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಹೆಚ್ಚು ಪಂದ್ಯಗಳನ್ನು ಆಡಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ ತಂಡ 23 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ಹಾಗೆಯೇ ಕಿವೀಸ್ ತಂಡ 23 ರಲ್ಲಿ 13 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನದ ನಂತರ, ದಕ್ಷಿಣ ಆಫ್ರಿಕಾ ಈ ವರ್ಷ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲುವ ಮೂಲಕ ಶೇ. 65.21 ರಷ್ಟು ಗೆಲುವಿನ ಸರಾಸರಿ ಹೊಂದಿತ್ತು. ಇದಾಗ್ಯೂ ಸೆಮಿಫೈನಲ್ ಹಂತಕ್ಕೇರಲು ದಕ್ಷಿಣ ಆಫ್ರಿಕಾಗೆ ಸಾಧ್ಯವಾಗಿಲ್ಲ.

ಇನ್ನು ಭಾರತ ತಂಡ 2021 ರಲ್ಲಿ 16 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ ಟೀಮ್ ಇಂಡಿಯಾ 10ರಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ 6 ಪಂದ್ಯಗಳಲ್ಲಿ ಸೋತಿದೆ. ಸೋತರು. ಅಂದರೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈ ವರ್ಷ 62.5 ರಷ್ಟು ಟಿ20 ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿತ್ತು. ಇದಾಗ್ಯೂ ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರಲು ಸಾಧ್ಯವಾಗಿರಲಿಲ್ಲ.

ಇಂಗ್ಲೆಂಡ್ ಸದ್ಯ ಟಿ20ಯಲ್ಲಿ ನಂಬರ್ 1 ತಂಡವಾಗಿದೆ. ಅವರು ಈ ವರ್ಷ 64% ಟಿ20 ಪಂದ್ಯಗಳನ್ನು ಗೆದಿದ್ದಾರೆ. ಈ ವರ್ಷ ಆಡಿದ 17 ಪಂದ್ಯಗಳಲ್ಲಿ ಇಂಗ್ಲೆಂಡ್ 11 ರಲ್ಲಿ ಗೆದ್ದು 6 ರಲ್ಲಿ ಸೋತಿದೆ. ಇದಾಗ್ಯೂ ಈ ಬಾರಿಯ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.

ಮತ್ತೊಂದೆಡೆ ಆಸ್ಟ್ರೇಲಿಯಾ ಈ ವರ್ಷ 22 ಟಿ20 ಪಂದ್ಯಗಳನ್ನಾಡಿದೆ. ಅದರಲ್ಲಿ ಗೆಲುವು ದಾಖಲಿಸಿದ್ದು ಕೇವಲ 10 ಪಂದ್ಯಗಳಲ್ಲಿ ಎಂಬುದು ವಿಶೇಷ. ಅಂದರೆ ಆಸ್ಟ್ರೇಲಿಯಾ ಈ ವರ್ಷ 12 ಪಂದ್ಯಗಳಲ್ಲಿ ಸೋತಿದೆ. ಅದರಂತೆ ಈ ವರ್ಷ ಆಸ್ಟ್ರೇಲಿಯಾ ತಂಡ ಗೆದ್ದಿರುವುದು ಶೇ. 45.45 ರಷ್ಟು ಪಂದ್ಯಗಳನ್ನು ಮಾತ್ರ. ಇದಾಗ್ಯೂ ಈ ಬಾರಿ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದು ವಿಶೇಷ.