
ಟೀಂ ಇಂಡಿಯಾ ಎರಡೆರಡು ವಿಶ್ವಕಪ್ಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ತಂಡದ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಇದೀಗ ಮತ್ತೊಮ್ಮೆ ಬ್ಯಾಟ್ ಹಿಡಿದು ಕ್ರಿಕೆಟ್ ಅಂಗಳದಲ್ಲಿ ಘರ್ಜಿಸಲು ಸಿದ್ಧರಾಗಿದ್ದಾರೆ. 2024 ರಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಪಂದ್ಯವನ್ನಾಡಿದ್ದ ಯುವಿ 1 ವರ್ಷಗಳ ಬಳಿಕ ಪಂದ್ಯವನ್ನಾಡಲಿದ್ದಾರೆ.

ವಾಸ್ತವವಾಗಿ ಮಾಜಿ ಕ್ರಿಕೆಟಿಗರೆಲ್ಲ ಸೇರಿ ಆಡುವ ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಫೆಬ್ರವರಿ 22 ರಿಂದ ಪ್ರಾರಂಭವಾಗಲಿದೆ. ಈ ಲೀಗ್‌ನಲ್ಲಿ ಭಾರತ ಸೇರಿದಂತೆ 6 ತಂಡಗಳು ಭಾಗವಹಿಸಲಿವೆ. ಈ ಪಂದ್ಯಾವಳಿಯಲ್ಲಿ ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಿವೃತ್ತ ಕ್ರಿಕೆಟಿಗರು ಭಾಗವಹಿಸಲಿದ್ದಾರೆ.

ಈ ಲೀಗ್‌ನಲ್ಲಿ ಯುವರಾಜ್ ಸಿಂಗ್ ಕೂಡ ಭಾರತ ಪರ ಆಡಲಿದ್ದಾರೆ. ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಮಾಸ್ಟರ್ಸ್‌ನ ಭಾಗವಾಗಲಿರುವ ಯುವರಾಜ್, ಕೊನೆಯ ಬಾರಿಗೆ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ ಪರ ಆಡಿದ್ದರು. ಈ ಲೀಗ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತು.

ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಬಗ್ಗೆ ಹೇಳುವುದಾದರೆ.. ಈ ಟೂರ್ನಿಯ ಪಂದ್ಯಗಳು ನವಿ ಮುಂಬೈ, ರಾಜ್‌ಕೋಟ್ ಮತ್ತು ರಾಯ್‌ಪುರದಲ್ಲಿ ನಡೆಯಲಿವೆ. ಇನ್ನು ಕ್ರಿಕೆಟ್‌ಗೆ ಮರಳುವ ಬಗ್ಗೆ ಮಾತನಾಡಿದ ಯುವರಾಜ್ ಸಿಂಗ್, ಸಚಿನ್ ಮತ್ತು ನನ್ನ ಇತರ ತಂಡದ ಆಟಗಾರರೊಂದಿಗೆ ಮೈದಾನಕ್ಕೆ ಇಳಿಯುವುದು ಹಳೆಯ ದಿನಗಳನ್ನು ಮೆಲುಕು ಹಾಕಿದಂತೆ. ನಿಮ್ಮ ಹಳೆಯ ತಂಡದ ಆಟಗಾರರೊಂದಿಗೆ ಆಟವಾಡುವುದು ಹಳೆಯ ನೆನಪುಗಳನ್ನು ಮರಳಿ ತರುತ್ತದೆ ಎಂದು ಹೇಳಿದ್ದಾರೆ.

ಯುವರಾಜ್ ಸಿಂಗ್ ಭಾರತ ಪರ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1900 ರನ್ ಮತ್ತು 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ, 304 ಏಕದಿನ ಪಂದ್ಯಗಳನ್ನಾಡಿರುವ ಯುವಿ 8701 ಮತ್ತು 111 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 58 ಟಿ20 ಪಂದ್ಯಗಳಲ್ಲಿ 1177 ರನ್ ಗಳಿಸುವುದರ ಜೊತೆಗೆ, ಅವರು 28 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.