3 ದಿನಗಳಲ್ಲಿ ಬರೋಬ್ಬರಿ 1011 ರನ್: ಟೆಸ್ಟ್ನಲ್ಲಿ ಹಿಸ್ಟರಿ ಸೃಷ್ಟಿ
Zimbabwe Vs Afghanistan 1st Test: ಅಫ್ಘಾನಿಸ್ತಾನ್ ಮತ್ತು ಝಿಂಬಾಬ್ವೆ ನಡುವಣ ಟೆಸ್ಟ್ ಪಂದ್ಯದಲ್ಲಿ ರನ್ ಮಳೆ ಹರಿದಿದೆ. ಡಿಸೆಂಬರ್ 26 ರಿಂದ ಶುರುವಾದ ಈ ಪಂದ್ಯದ ಮೂರು ದಿನದಾಟಗಳ ಮುಕ್ತಾಯದ ವೇಳೆಗೆ ಒಟ್ಟು 4 ಶತಕಗಳು ಹಾಗೂ 1 ದ್ವಿಶತಕ ಮೂಡಿಬಂದಿವೆ. ಇದಾಗ್ಯೂ ಅಫ್ಘಾನಿಸ್ತಾನ್ ತಂಡದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿಲ್ಲ ಎಂಬುದು ವಿಶೇಷ.
1 / 6
ಮೂರು ದಿನದಾಟಗಳಲ್ಲಿ 4 ಶತಕಗಳು... ಒಂದು ದ್ವಿಶತಕ. ಬರೋಬ್ಬರಿ 1011 ರನ್ಗಳು. ಇಂತಹದೊಂದು ಸ್ಕೋರ್ ಕಾರ್ಡ್ಗೆ ಸಾಕ್ಷಿಯಾಗಿದ್ದು ಝಿಂಬಾಬ್ವೆ ಮತ್ತು ಅಫ್ಘಾನಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡದ ನಾಯಕ ಕ್ರೇಗ್ ಎರ್ವಿನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
2 / 6
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸೀನ್ ವಿಲಿಯಮ್ಸ್ 174 ಎಸೆತಗಳಲ್ಲಿ 10 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ 154 ರನ್ ಕಲೆಹಾಕಿದರು. ಇನ್ನು ಕ್ರೇಗ್ ಎರ್ವಿನ್ 104 ರನ್ ಬಾರಿಸಿದರೆ, ಬ್ರಿಯಾನ್ ಬೆನೆಟ್ 124 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 110 ರನ್ ಚಚ್ಚಿದರು. ಈ ಮೂಲಕ ಝಿಂಬಾಬ್ವೆ ತಂಡವು ಮೊದಲ ಇನಿಂಗ್ಸ್ನಲ್ಲಿ 586 ರನ್ ಕಲೆಹಾಕಿತು. ಇದು ಟೆಸ್ಟ್ ಇತಿಹಾಸದಲ್ಲಿ ಝಿಂಬಾಬ್ವೆ ತಂಡದ ಗರಿಷ್ಠ ಸ್ಕೋರ್ ಎಂಬುದು ವಿಶೇಷ.
3 / 6
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಅಫ್ಘಾನಿಸ್ತಾನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಸೆದಿಖುಲ್ಲಾ ಅಟಲ್ 3 ರನ್ಗಳಿಸಿ ಔಟಾದರೆ, ಅಬ್ದುಲ್ ಮಲಿಕ್ 23 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿ ರಹಮತ್ ಶಾ ಹಾಗೂ ಹಶ್ಮತುಲ್ಲಾ ಶಾಹಿದಿಯನ್ನು ಔಟ್ ಮಾಡಲು ಝಿಂಬಾಬ್ವೆ ಬೌಲರ್ಗಳು ವಿಫಲರಾದರು.
4 / 6
ಪರಿಣಾಮ 3ನೇ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ ಈ ಜೋಡಿಯು ರನ್ ಪೇರಿಸುತ್ತಾ ಸಾಗಿದರು. ಇದರ ನಡುವೆ ರಹಮತ್ ಶಾ 416 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 23 ಫೋರ್ಗಳೊಂದಿಗೆ ಅಜೇಯ 231 ರನ್ ಬಾರಿಸಿದರು. ಮತ್ತೊಂದೆಡೆ ಶಾಹಿದಿ 276 ಎಸೆತಗಳಲ್ಲಿ 16 ಫೋರ್ಗಳೊಂದಿಗೆ ಅಜೇಯ 141 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರನೇ ದಿನದಾಟದ ಅಂತ್ಯಕ್ಕೆ ಅಫ್ಘಾನಿಸ್ತಾನ್ 2 ವಿಕೆಟ್ ಕಳೆದುಕೊಂಡು 425 ರನ್ ಪೇರಿಸಿದೆ.
5 / 6
ಮೂರನೇ ವಿಕೆಟ್ಗೆ 361 ರನ್ಗಳ ಜೊತೆಯಾಟವಾಡುವ ಮೂಲಕ ರಹಮತ್ ಶಾ ಹಾಗೂ ಶಾಹಿದಿ ಅಫ್ಘಾನ್ ಪರ ಟೆಸ್ಟ್ನಲ್ಲಿ ಅತ್ಯಧಿಕ ರನ್ಗಳ ಜೊತೆಗಾರಿಕೆಯ ದಾಖಲೆ ಬರೆದಿದ್ದಾರೆ. ಅಲ್ಲದೆ 2019ರ ಬಳಿಕ ಟೆಸ್ಟ್ನಲ್ಲಿ ವಿಕೆಟ್ ನಷ್ಟವಿಲ್ಲದೆ ಪೂರ್ಣ ದಿನದಾಟವಾಡಿದ ಜೋಡಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
6 / 6
ಇದೀಗ 425 ರನ್ ಕಲೆಹಾಕಿರುವ ಅಫ್ಘಾನಿಸ್ತಾನ್ ತಂಡವು 4ನೇ ದಿನದಾಟದಲ್ಲಿ 121 ರನ್ಗಳಿಸಿದರೆ ಟೆಸ್ಟ್ನಲ್ಲಿ ತನ್ನ ಗರಿಷ್ಠ ಸ್ಕೋರ್ ದಾಖಲೆಯನ್ನು ಮುಟ್ಟಲಿದೆ. ಹೀಗಾಗಿ ಒಂದೇ ಪಂದ್ಯದ ಮೂಲಕ ಝಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ್ ತಮ್ಮ ಗರಿಷ್ಠ ಸ್ಕೋರ್ಗಳ ದಾಖಲೆಯನ್ನು ಬರೆಯಲಿದೆಯಾ ಕಾದು ನೋಡಬೇಕಿದೆ.
Published On - 7:19 am, Sun, 29 December 24