
2026 ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಐದನೇ ಪದಕವನ್ನು ತನ್ನದಾಗಿಸಿಕೊಂಡಿದೆ. ವೇಟ್‌ಲಿಫ್ಟರ್ ಜ್ಞಾನೇಶ್ವರಿ ಯಾದವ್ 53 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದು ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಸಿಕ್ಕಿರುವ 4ನೇ ಪದಕವಾಗಿದೆ(PC-PTI).

ಇದಕ್ಕೂ ಮೊದಲು, ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ ಮೂರು ಪದಕಗಳನ್ನು ಗೆದ್ದಿತ್ತು. ಮೀರಾಬಾಯಿ ಚಾನು ಸತತ ಮೂರನೇ ಬಾರಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ, ರಾಜಾ ಮುತ್ತುಪಾಡಿ ಮತ್ತು ರಿಷಿಕಾಂತ ಸಿಂಗ್ ಬೆಳ್ಳಿ ಪದಕವನ್ನು ಗೆದ್ದಿದ್ದರು(PC-PTI).

ಜ್ಞಾನೇಶ್ವರಿ ಯಾದವ್ ಮೊದಲ ಸುತ್ತಿನಲ್ಲಿ 82 ಕೆಜಿ, 85 ಕೆಜಿ ಮತ್ತು 88 ಕೆಜಿ ಎತ್ತಿದರು. ನಂತರ ಅವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 103 ಕೆಜಿ ತೂಕ ಎತ್ತಿದರು. ತಮ್ಮ ಎರಡನೇ ಪ್ರಯತ್ನದಲ್ಲಿ 107 ಕೆಜಿ ಮತ್ತು ಮೂರನೇ ಸುತ್ತಿನಲ್ಲಿ 111 ಕೆಜಿ ಎತ್ತುವ ಮೂಲಕ ದೇಶಕ್ಕೆ ಬೆಳ್ಳಿ ಪದಕವನ್ನು ಖಚಿತಪಡಿಸಿದರು(PC-PTI).

ಜ್ಞಾನೇಶ್ವರಿ ಯಾದವ್ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಭೋಂಡಿಯಾ ಗ್ರಾಮದವರಾಗಿದ್ದು, ಛತ್ತೀಸ್‌ಗಢದಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ಸ್ವತಃ ಬಾಡಿಬಿಲ್ಡರ್ ಆಗಿದ್ದು ತಮ್ಮ ಕುಟುಂಬವನ್ನು ಪೋಷಿಸಲು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಾರೆ(PC-PTI).

ಜ್ಞಾನೇಶ್ವರಿ ಯಾದವ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2022 ರಲ್ಲಿ ಗ್ರೀಸ್‌ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜ್ಞಾನೇಶ್ವರಿ, 2023 ರಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್, ಸೀನಿಯರ್ ಚಿನ್ನ ಮತ್ತು ಅತ್ಯುತ್ತಮ ಜೂನಿಯರ್ ಲಿಫ್ಟರ್ ಪ್ರಶಸ್ತಿಗಳನ್ನು ಗೆದ್ದರು. ಹಾಗೆಯೇ 2025 ರಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವರು 2026 ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಮತ್ತು ಈಗ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ(PC-PTI).