
ಹಾಸನ ಜಿಲ್ಲೆಯ ಆಲೂರು ತಾಲೂಕಿನ ನಲ್ಲೂರು ಗ್ರಾಮದಲ್ಲಿ ಉಪಟಳ ಕೊಡುತ್ತಿದ್ದ ಕಾಡಾನೆಯನ್ನು ಅಭಿಮನ್ಯು ನೇತೃತ್ವದ ಸಾಕಾನೆಗಳ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಯಾಪ್ಟನ್ ಅಭಿಮನ್ಯು, ಪ್ರಶಾಂತ, ಹರ್ಷ, ಅಶ್ವತ್ಥಾಮ, ಸುಗ್ರೀವ, ಧನಂಜಯ, ಭೀಮ, ಮಹೇಂದ್ರ ಆನೆಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದವು.

ಒಟ್ಟು ಎಂಟು ಸಾಕಾನೆಗಳ ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆಯಿಂದ ಆರಂಭವಾಗಿತ್ತು.

ಇಂದು ಆಲೂರು ತಾಲೂಕಿನ ನಲ್ಲೂರಿನಲ್ಲಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

ನಲ್ಲೂರು ಗ್ರಾಮದಲ್ಲಿ ಬೆಳೆ ಹಾನಿ ಮಾಡುತ್ತಿದ್ದ ಈ ಕಾಡಾನೆಯಿಂದಾಗಿ ಜನರಲ್ಲಿ ಜೀವ ಭಯ ಸೃಷ್ಟಿಯಾಗಿತ್ತು.

ಸೆರೆ ಹಿಡಿಯಲಾದ ಕಾಡಾನೆಯನ್ನು ಲಾರಿ ಮೂಲಕ ಶಿಬಿರಕ್ಕೆ ಕೊಂಡೊಯ್ಯಲಾಯಿತು. ಇದಕ್ಕೂ ಮುನ್ನ ಜಮಾಯಿಸಿದ್ದ ಜನರು ತಮ್ಮ ಮೊಬೈಲ್ ಮೂಲಕ ಕಾಡಾನೆಯ ಫೋಟೋ, ವಿಡಿಯೋ ಮಾಡಿಕೊಂಡರು. ಕೆಲವರು ಸೆಲ್ಫಿ ಕೂಡ ತೆಗೆದುಕೊಂಡರು.

ಇದೀಗ ಕಾಡಾನೆ ಸೆರೆಯಿಂದಾಗಿ ನಿಟ್ಟುಸಿರು ಬಿಟ್ಟ ಜನರು, ಸೆರೆಯಾದ ಒಂಟಿ ಸಲಗವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.

ಡಿಸೆಂಬರ್ 4ರಂದು ಕಾರ್ಯಾಚರಣೆ ವೇಳೆ ದಸರಾ ಆನೆ ಕ್ಯಾಪ್ಟನ್ ಅರ್ಜುನ ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟಿತ್ತು. ಆ ನಂತರ ಕಾಡಾನೆ ಸೆರೆ ಕಾರ್ಯಾಚರಣೆಗೆ ತಾತ್ಕಾಲಿಕ ತೆರೆ ಬಿದ್ದಿತ್ತು.