Kannada News Photo gallery Haveri grand bullock cart race, Thousands of people gathered to see the festival, here are the photos
Haveri News: ಅದ್ದೂರಿಯಾಗಿ ನಡೆದ ಎತ್ತಿನ ಬಂಡಿ ಓಟ; ಹಬ್ಬ ನೋಡಲು ಸೇರಿರೋ ಸಾವಿರಾರು ಜನ, ಇಲ್ಲಿದೆ ಫೋಟೋಸ್
ಆ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಬಂಡಿ ಓಟದ ಸ್ಪರ್ಧೆ ನಡೆಯುತ್ತದೆ. ರೈತರು ತಮ್ಮ ಬಿತ್ತನೆ ಆರಂಭ ಮಾಡುವ ಮುನ್ನ ಎತ್ತುಗಳಿಗಾಗಿ ಮಾಡುವ ಹಬ್ಬ ಇದಾಗಿದ್ದು, ಈ ಹಬ್ಬ ನೋಡಲು ಸಾವಿರ ಸಾವಿರ ಜನ, ಬೇರೆ ಜಿಲ್ಲೆಗಳಿಂದ ಬರುತ್ತಾರೆ. ಅಷ್ಟಕ್ಕೂ ಆ ಹಬ್ಬದ ವಿಶೇಷತೆ ಆದ್ರೂ ಏನು? ಅಂತೀರಾ ಇಲ್ಲಿದೆ ನೋಡಿ.
1 / 9
ಮಿಂಚಿನ ಓಟ ಓಡುತ್ತಿರುವ ಎತ್ತುಗಳು, ಎತ್ತಿನ ಬಂಡಿ ಓಟ ನೋಡಲು ಸೇರಿರೋ ಜನರ ದಂಡು. ಅಲಂಕಾರಗೊಂಡಿರೋ ಎತ್ತಿನಬಂಡಿ, ಅದನ್ನ ಓಡಿಸುತ್ತಿರುವ ವೀರಗಾರರು. ಹೌದು ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕಂಡುಬಂದ ದೃಶ್ಯಗಳಿವು.
2 / 9
ಕಾರಹುಣ್ಣಿಮೆ ನಂತರದಲ್ಲಿ ಗ್ರಾಮದಲ್ಲಿ ಭರಮಲಿಂಗೇಶ್ವರ ಜಾತ್ರೆ ಆಚರಿಸಲಾಗುತ್ತದೆ. ಜಾತ್ರೆ ಸಮಯದಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಎತ್ತುಗಳನ್ನು ತಂದು ದೇವಸ್ಥಾನದ ಮುಂಭಾಗದಲ್ಲಿ ಅವುಗಳನ್ನ ಓಡಿಸಿ ಸಂಭ್ರಮ ಆಚರಿಸುತ್ತಾರೆ.
3 / 9
ಗ್ರಾಮದ ವೀರಗಾರರ ಮನೆತನದವರು ಮಾತ್ರ ಈ ಬಂಡಿಗಳನ್ನು ಓಡಿಸುತ್ತಾರೆ. ವೀರಗಾರರ ಮನೆತನದವರು ಒಂಬತ್ತು ದಿನಗಳ ಕಾಲ ಉಪವಾಸ ಮಾಡಿರುತ್ತಾರೆ. ಉಪವಾಸದ ನಂತರ ಭರಮಲಿಂಗೇಶ್ವರ ಜಾತ್ರೆ ಪ್ರಯುಕ್ತ ಬಂಡಿ ಉತ್ಸವ ಮಾಡುತ್ತಾರೆ.
4 / 9
ವಿಶೇಷವಾಗಿ ಅಲಂಕರಿಸಿದ ಬಂಡಿಗಳಿಗೆ ಎತ್ತುಗಳನ್ನು ಹೂಡಿ ಎತ್ತುಗಳನ್ನು ಓಡಿಸುತ್ತಾರೆ. ಗ್ರಾಮದ ಭರಮಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎತ್ತಿನ ಬಂಡಿ ಓಡಿಸಲಾಗುತ್ತದೆ. ಬಂಡಿ ಉತ್ಸವದ ಮೊದಲನೆ ದಿನ ಗ್ರಾಮ ಹಾಗೂ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ಎತ್ತುಗಳನ್ನು ತಂದು ಓಡಿಸುತ್ತಾರೆ.
5 / 9
ಇನ್ನು ಈ ಕರ್ಜಗಿ ಗ್ರಾಮದ ಕರಿಬಂಡಿ ಉತ್ಸವಕ್ಕೆ ಸುಮಾರು ವರ್ಷಗಳ ಇತಿಹಾಸವಿದೆ.ಕರಿಬಂಡಿ ಉತ್ಸವಕ್ಕೆ ಎರಡು ಬಂಡಿಗಳನ್ನು ಸಜ್ಜುಗೊಳಿಸಲಾಗಿರುತ್ತದೆ. ಒಂದೊಂದು ಬಂಡಿಯಲ್ಲಿ ತಲಾ ಏಳು ಜನರು ಕುಳಿತು ಬಂಡಿಗಳನ್ನು ಓಡಿಸುತ್ತಾರೆ. ಗ್ರಾಮದ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎದುರು ಬದುರಾಗಿ ಎರಡು ಬಂಡಿಗಳು ಓಡುತ್ತವೆ.
6 / 9
ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎತ್ತುಗಳನ್ನು ಕಟ್ಟಿ ಬಂಡಿ ಓಡಿಸುವುದರಿಂದ ಎತ್ತುಗಳಿಗೆ ವರ್ಷಪೂರ್ತಿ ಯಾವುದೇ ರೋಗ ರುಜಿನಗಳು ಬರುವುದಿಲ್ಲ. ರೈತಾಪಿ ವರ್ಗದ ಜನರಿಗೆ ಒಳ್ಳೆಯದಾಗುತ್ತದೆ. ವರ್ಷಪೂರ್ತಿ ರೈತರ ಬದುಕು ಸಂಪನ್ನವಾಗಿರುತ್ತದೆ ಎಂಬ ನಂಬಿಕೆಯಿದೆ.
7 / 9
ಈ ನಂಬಿಕೆಯ ಮೇಲೆ ಸುಮಾರು ವರ್ಷಗಳಿಂದ ಗ್ರಾಮದಲ್ಲಿ ಕರಿಬಂಡಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಬಂಡಿಗಳು ಓಡುವ ಎರಡೂ ಬದಿಗಳಲ್ಲಿ ನಿಂತುಕೊಂಡು ಜನರು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಎತ್ತುಗಳಿಗೆ ಹುರುಪು ನೀಡುತ್ತಾರೆ. ಎತ್ತುಗಳೂ ಕೂಡ ಅಷ್ಟೆ ಸಂಭ್ರಮದಿಂದ ಮಿಂಚಿನ ಓಟ ಓಡುತ್ತವೆ. ಒಂದೊಂದು ಜೋಡಿ ಎತ್ತುಗಳು ಒಂದು ಸುತ್ತು ಓಟ ಓಡುತ್ತವೆ.
8 / 9
ಕರಿಬಂಡಿ ಉತ್ಸವ ನೋಡಲು ಕರ್ಜಗಿ, ಹಿರೇಮುಗದೂರು, ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನರು ಬಂದಿರುತ್ತಾರೆ. ಬಂಡಿಗಳನ್ನು ಓಡಿಸುವ ಎರಡೂ ಬದಿಯ ರಸ್ತೆಗಳು, ಮನೆಯ ಮೇಲ್ಛಾವಣಿಗಳ ಮೇಲೆ ಕುಳಿತು ಕರಿಬಂಡಿ ಓಟದ ಸಂಭ್ರಮವನ್ನು ಜನರು ಕಣ್ತುಂಬಿಕೊಳ್ಳುತ್ತಾರೆ.
9 / 9
ಒಟ್ಟಿನಲ್ಲಿ ಸುಮಾರು ವರ್ಷಗಳಿಂದ ಗ್ರಾಮದಲ್ಲಿ ನಡೆದುಕೊಂಡು ಬಂದಿರುವ ಕರ್ಜಗಿ ಬಂಡಿ ಉತ್ಸವ ಪ್ರತಿವರ್ಷದಂತೆ ಈ ವರ್ಷವೂ ಎತ್ತಿನ ಬಂಡಿ ಇಬ್ಬರ ಕಾಲಿನ ಮೇಲೆ ಹೊಗಿ ಸ್ವಲ್ಪ ಏಟು ಆಗಿದ್ದು ಬಿಟ್ರೆ, ಬೇರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದರು.