Updated on: Feb 03, 2023 | 5:20 PM
ಮಧ್ಯಮ ಕ್ರಮಾಂಕದ ಎಸ್ ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕ್ರೆಟಾ 2023ರ ಆವೃತ್ತಿಯು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಕ್ರೆಟಾ ಈ ಹಿಂದಿನ ಮಾದರಿಗಿಂತಲೂ ಹಲವಾರು ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೊಂಡಿದೆ.
ಹೊಸ ಕ್ರೆಟಾ ಕಾರಿನ ಡೀಸೆಲ್ ಆವೃತ್ತಿಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸಲಾಗಿದ್ದು, ಡೀಸೆಲ್ ಆವೃತ್ತಿಯು ಹೊಸ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳನ್ನ ಪೂರೈಸಿದೆ.
ಕ್ರೆಟಾ ಹೊಸ ಆವೃತ್ತಿಯನ್ನು ಹಿಂದೆಂದಿಗಿಂತಲೂ ಹೆಚ್ಚು ಬದಲಾವಣೆಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಮಾದರಿಯು ಇ, ಇಎಕ್ಸ್, ಎಸ್, ಎಸ್ಎಕ್ಸ್ ವೆರಿಯೆಂಟ್ ಗಳೊಂದಿಗೆ ಡಾರ್ಕ್ ಎಡಿಷನ್ ನಲ್ಲಿ ಖರೀದಿಗೆ ಲಭ್ಯವಿದೆ.
2023ರ ಕ್ರೆಟಾ ಬೆಸ್ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.84 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 19.13 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಪೆಟ್ರೋಲ್ ಮಾದರಿಗಳು ರೂ. 10.84 ಲಕ್ಷದಿಂದ ರೂ. 18. 34 ಲಕ್ಷ ಬೆಲೆ ಹೊಂದಿದ್ದರೆ ಡೀಸೆಲ್ ಮಾದರಿಯು ಆರಂಭಿಕವಾಗಿ ರೂ. 11.89 ಲಕ್ಷ ಬೆಲೆ ಹೊಂದಿದೆ.
ರಿಯರ್ ಡ್ರೈವ್ ಎಮಿಷನ್ ಮಾನದಂಡಗಳನ್ನು ಪೂರೈಸಿರುವ ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ರೂ. 20 ಸಾವಿರದಿಂದ ರೂ. 45 ಸಾವಿರದಷ್ಟು ದುಬಾರಿಯಾಗಿದ್ದು, ಹೊಸ ಕಾರಿನ 1.5 ಲೀಟರ್ ಪೆಟ್ರೋಲ್ ಮಾದರಿಯು ಹೊಸ ಆರ್ ಡಿಇ ಮಾನದಂಡದೊಂದಿಗೆ ಹೆಚ್ಚು ಕಾರ್ಯಕ್ಷಮತೆಯೊಂದಿಗೆ ಅತಿ ಕಡಿಮೆ ಮಾಲಿನ್ಯ ಹೊರಸೂಸಲಿದೆ.
ಜೊತೆಗೆ ಹೊಸ ಕಾರಿನ ಪೆಟ್ರೋಲ್ ಮಾದರಿಯು ಇದೀಗ ಶೇ. 20 ರಷ್ಟು ಎಥೆನಾಲ್ ಮಿಶ್ರಿಣದೊಂದಿಗೆ ಚಾಲನೆಯಾಗಲಿದೆ. ಸದ್ಯ ಪೆಟ್ರೋಲ್ ನಲ್ಲಿ ಶೇ.10 ರಷ್ಟು ಎಥನಾಲ್ ಮಿಶ್ರಣ ಮಾಡುತ್ತಿರುವ ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ಶೇ.20 ರಷ್ಟು ಎಥೆನಾಲ್ ಮಿಶ್ರಣ ಮಾಡಲಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಹೊಸ ಕಾರಿಗಳಿಗೂ ರಿಯರ್ ಡ್ರೈವ್ ಎಮಿಷನ್ ಮಾನದಂಡವನ್ನು ಕಡ್ಡಾಯಗೊಳಿಸಲಾಗಿದೆ.
ಪೆಟ್ರೋಲ್ ಮಾದರಿಯ ನಂತರ ಡೀಸೆಲ್ ಮಾದರಿಯಲ್ಲೂ ಹ್ಯುಂಡೈ ಕಂಪನಿಯು ಮಹತ್ವದ ಬದಲಾವಣೆ ತಂದಿದ್ದು, 1.5 ಲೀಟರ್ ಡೀಸೆಲ್ ಮಾದರಿಯು ಎಸ್ ಇಆರ್ ತಂತ್ರಜ್ಞಾನದೊಂದಿಗೆ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಿಸಿದ್ದು, ಕಾರ್ಯಕ್ಷಮತೆಯಲ್ಲೂ ಕೂಡಾ ಹೆಚ್ಚಳವಾಗಿದೆ.
ಹೊಸ ಡೀಸೆಲ್ ಮಾದರಿಯು 113.5 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಹೊಸ ಕಾರಿನಲ್ಲಿ ಕಂಪನಿಯು ಬೆಸ್ ವೆರಿಯೆಂಟ್ ನಲ್ಲೂ ಇರುವಂತೆ 6 ಏರ್ ಬ್ಯಾಗ್ ಜೋಡಿಸಿದೆ. ಜೊತೆಗೆ ಹೊಸ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಸಿಸ್ಟಂ, ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಸೌಲಭ್ಯಗಳಿವೆ.
Published On - 5:20 pm, Fri, 3 February 23