
ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಿಂದ ಇಡೀ ದೇಶ ಶೋಕದಲ್ಲಿ ಮುಳುಗಿದೆ. ದೇಶದೆಲ್ಲೆಡೆ ಉಗ್ರರ ಕೃತ್ಯವನ್ನು ಖಂಡಿಸಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಸಾರ್ವಜನಿಕವಾಗಿ ಸಂಭ್ರಮಾಚರಣೆ ಮಾಡಿದ್ದಾರೆ.

ಕುಶಾಲನಗರ ವೃತ್ತ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ಸಿಪಿಐ ಬಿ.ಎಸ್. ದಿನೇಶ್ ಕುಮಾರ್ ಅವರಿಗೆ ನಾಗರಿಕರ ಹಿತರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಕನ್ನಡ ಪರ, ದಲಿತ ಪರ ಹೋರಾಟಗಾರರ ವೇದಿಕೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ,

ಈ ಸಮಾರಂಭದಲ್ಲಿ ದಿನೇಶ್ ಕುಮಾರ್ ಅವರು ಕ್ರೇನ್‌ನಲ್ಲಿ ಹಾರ ಹಾಕಿಸಿಕೊಂಡು, ತೆರೆದ ಜೀಪ್‌ನಲ್ಲಿ ರ್ಯಾಲಿ ನಡೆಸಿ, ಹುಲಿಯ ಚಿತ್ರವಿರುವ ಹಾರ ಧರಿಸಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಈ ಸಮಾರಂಭ ತುಮಕೂರು ನಗರದ ಗ್ರಂಥಾಲಯದ ಆಡಿಟೋರಿಯಂನಲ್ಲಿ ನಡೆದಿದ್ದು, ದೇಶದಾದ್ಯಂತ ಶೋಕಾಚರಣೆಯ ವಾತಾವರಣವಿರುವಾಗ ಇಂತಹ ಕಾರ್ಯಕ್ರಮ ಆಯೋಜನೆಯಾಗಿರುವುದು ಟೀಕೆಗೆ ಗುರಿಯಾಗಿದೆ.

ಉಗ್ರರ ದಾಳಿ ಹಿನ್ನೆಲೆ ಐಪಿಎಲ್ 2025ರ ಇಂದಿನ ಪಂದ್ಯದಲ್ಲಿ ಡಿಜೆ, ಚಿಯರ್‌ಲೀಡರ್‌ಗಳನ್ನೇ ನಿಷೇಧಿಸಿ, ಎಲ್ಲ ಆಟಗಾರರು ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ, ಒಂದು ನಿಮಿಷದ ಮೌನಾಚರಣೆಯ ಮೂಲಕ ಉಗ್ರ ದಾಳಿಯ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಆದರೆ, ತುಮಕೂರಿನಲ್ಲಿ ನಡೆದ ಈ ಸಂಭ್ರಮಾಚರಣೆಯ ಕಾರ್ಯಕ್ರಮ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಕಳೆದ ಮಾರ್ಚ್ 24ರಂದು ತುಮಕೂರು ನಗರ ಪೊಲೀಸ್ ಠಾಣೆಯಿಂದ ಕುಶಾಲನಗರ ವೃತ್ತ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ದಿನೇಶ್ ಕುಮಾರ್ ಅವರಿಗೆ ಈ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಈ ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಶೋಕದ ವಾತಾವರಣದಲ್ಲಿ ಇಂತಹ ಕಾರ್ಯಕ್ರಮಕ್ಕೆ ಬೇಕೇ? ಎಂದು ಪ್ರಶ್ನಿಸಿದ್ದಾರೆ.