
ಗೌರಿ ಗಣೇಶ ಹಬ್ಬ ಆರಂಭವಾಗಿ ಸುಮಾರು ಒಂದು ತಿಂಗಳು ಕಳೆಯುತ್ತಾ ಬಂದರೂ ನಗರದಲ್ಲಿ ಹಬ್ಬದ ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಸಾವಿರಾರು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗಳು ಪೂರ್ಣಗೊಂಡಿದ್ದರೂ, ರಾಮಮೂರ್ತಿನಗರ ಸಮೀಪದ ಕಲ್ಕೆರೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿ ಇದೀಗ ಎಲ್ಲರ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಗಣೇಶೋತ್ಸವದ ಅಂಗವಾಗಿ ರಾಮಮೂರ್ತಿನಗರ ಸಮೀಪದ ಕಲ್ಕೆರೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಾದರಿಯಲ್ಲಿ ಮಂಟಪ ನಿರ್ಮಿಸಿ ಗಣೇಶ ಪ್ರತಿಷ್ಠಾಪಿಸಲಾಗಿದೆ. ಅಥರ್ವ ಯುವ ಸೇನೆಯ ವತಿಯಿಂದ ಈ ಅಪರೂಪದ ಮಂಟಪವನ್ನು ನಿರ್ಮಿಸಲಾಗಿದೆ.
16 ಲಕ್ಷ ರೂ ವೆಚ್ಚದಲ್ಲಿ 3 ತಿಂಗಳ ಪರಿಶ್ರಮದಿಂದ ಈ ಮಂಟಪ ನಿರ್ಮಿಸಲಾಗಿದ್ದು, ಕೆಂಪು ಮತ್ತು ಚಿನ್ನದ ಬಣ್ಣದ ಕಂಬಗಳು, ಗೋಪುರ ಹಾಗೂ ಧ್ವಜಗಳನ್ನು ಅಳವಡಿಸಲಾಗಿದೆ. ಮಂತ್ರಾಲಯದ ಮಠವನ್ನು ಹೋಲುವಂತೆ ಮಂಟಪದ ವಿನ್ಯಾಸ ರೂಪಿಸಲಾಗಿದೆ.
ಕಳೆದ ಹತ್ತು ವರ್ಷಗಳಿಂದ ವಿಭಿನ್ನ ಪರಿಕಲ್ಪನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿರುವ ಅಥರ್ವ ಯುವ ಸೇನೆ, ಈ ಬಾರಿ ಭಕ್ತರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ಮಂತ್ರಾಲಯದ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಮಂಟಪದ ಗೋಡೆಗಳ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಗಳ ಚರಿತ್ರೆ, ಮಹಿಮೆ ಬಿಂಬಿಸುವ ಚಿತ್ರಪಟಗಳನ್ನು ಅಳವಡಿಸಲಾಗಿದೆ.
ಗಣೇಶೋತ್ಸವದ ಮೊದಲ ದಿನ ಕಾಶಿಯಿಂದ ಆಗಮಿಸಿದ್ದ ಪಂಡಿತರಿಂದ ಗಂಗಾ ಆರತಿ ನೆರವೇರಿಸಲಾಯಿತು. ಈ ವೇಳೆ ಸ್ಥಳೀಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ಕಲ್ಕೆರೆಯ ಗಣೇಶ ಪ್ರಮುಖ ಆಕರ್ಷಣೆಯಾಗಿದೆ. ಭಾನುವಾರ ಗಣೇಶ ವಿಸರ್ಜನೆ ನಡೆಯಲಿದೆ.