ಸರ್ಕಾರಿ ಬಸ್ಸಿನಲ್ಲಿ ಸಂಚಾರ ಮಾಡೋದು ಬೋರೋ ಬೋರು ಎನ್ನುವವರಿಗೂ ಈ ಬಸ್ ಖಂಡಿತ ಇಷ್ಟವಾಗುತ್ತದೆ. ಅರೆಬರೆ ಇಂಗ್ಲಿಷ್ ಮಾತಾಡುವ ಶೋಕಿವಾಲಾಗಳ ಮನದಲ್ಲೂ ಈ ಬಸ್ ಕನ್ನಡದ ಕಿಚ್ಚು ಹೊತ್ತಿಸುತ್ತದೆ. ಆ ಬಸ್ ಏರಿದರೆ ಸಾಕು ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸದತ್ತ ಕಣ್ಮನ ತೆರೆದುಕೊಳ್ಳುತ್ತದೆ. ಕೋಟೆನಾಡು ಚಿತ್ರದುರ್ಗದಲ್ಲಿ ಕೆಎಸ್ಆರ್ಟಿಸಿ ಚಾಲಕ ನಟರಾಜ್ ಅವರ ಕನ್ನಡ ಪ್ರೇಮದ ಫಲವಾದ ಕನ್ನಡ ರಥದಿಂದ ಕರುನಾಡ ಜನರ ಮನಸೂರೆಗೊಂಡಿದೆ.
ವೃತ್ತಿಸಹಜವಾಗಿ ಬಸ್ಸಿನಲ್ಲೇ ಕನ್ನಡದ ದೀಪ ಬೆಳಗುತ್ತಿರುವ ನಟರಾಜ್
ಕುವೆಂಪು, ಬೇಂದ್ರೆ, ಕಾರಂತ, ತ.ರಾ.ಸು, ಮಾಸ್ತಿ, ಭೈರಪ್ಪ, ಬಿ.ಎಲ್.ವೇಣು ಮತ್ತಿತ್ತರ ಮೇರು ಸಾಹಿತಿಗಳ ಸುಮಾರು 300 ಕೃತಿಗಳಿರುವ ಗ್ರಂಥಾಲಯವೂ ಇದೆ ಈ ಕನ್ನಡ ರಥದಲ್ಲಿ. ವಿವಿಧ ದಿನಪತ್ರಿಕೆಗಳನ್ನೂ ಸಂಗ್ರಹಿಸಿಡುತ್ತಾರೆ. ನಿತ್ಯವೂ ಅನೇಕ ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಬಸ್ನಲ್ಲಿ ಸಂಚರಿಸುತ್ತಲೇ ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡುತ್ತಾರೆ.
10 ವರ್ಷಗಳಿಂದ ಕರುನಾಡ ಕನ್ನಡ ರಥ ಸೇವೆ ಅಭಾದಿತ
ಕಳೆದ ಒಂದು ದಶಕದಿಂದ ತಾವು ಚಾಲಕರಾಗಿರುವ ಎಲ್ಲಾ ಬಸ್ಸುಗಳಲ್ಲೂ ನಟರಾಜ್ ಒಂದಲ್ಲಾ ಒಂದು ವಿಶೇಷಗಳನ್ನು ಅಳವಡಿಸುತ್ತ ಸಾಗಿದ್ದಾರೆ. ರಾಜ್ಯೋತ್ಸವ ಸಂದರ್ಭದಲ್ಲಂತೂ ಇಡೀ ಬಸ್ ಕನ್ನಡದ ಕಂಪು ಸೂಸುತ್ತದೆ. ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರನಾಯಕರ ಭಾವಚಿತ್ರವನ್ನು ಪ್ರದರ್ಶಿಸಿ ದೇಶ ಪ್ರೇಮ ಸಾರುತ್ತಾರೆ. ಚಿತ್ರದುರ್ಗದ ಮದಕರಿ ನಾಯಕ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಚಿತ್ರಗಳು ಮನ ಸೆಳೆಯುತ್ತವೆ.
ನಿತ್ಯ 10 ಸಾವಿರ ರೂಪಾಯಿ ಹಣ ಸಂಗ್ರಹವಾದರೆ ಇಲಾಖೆಯಿಂದ ನಮಗೆ ಇನ್ಸೆಂಟಿವ್ ಆಗಿ ನೂರು ರೂಪಾಯಿ ಕೊಡಲಾಗುತ್ತದೆ. ಅದೇ ಹಣದಲ್ಲಿ ಕನ್ನಡ ಸೇವೆ ಮಾಡುತ್ತಿದ್ದೇನೆ. ಬಸ್ ಏರಿದವರು ಪುಸ್ತಕಗಳ ಮೇಲೆ ಕಣ್ಣಾಡಿಸಿ ಕನ್ನಡ ಪ್ರೀತಿ ವ್ಯಕ್ತಪಡಿಸಿದರೆ ಸಾಕು ನಮ್ಮ ಶ್ರಮ ಸಾರ್ಥಕವಾದಂತೆಯೇ.
-ಕನ್ನಡ ರಥ ಚಾಲಕ ನಟರಾಜ್
ತಮ್ಮ ಕರ್ತವ್ಯದ ಜೊತೆಗೆ ವಿಶೇಷ ಕನ್ನಡ ಪ್ರೀತಿಯ ಮೂಲಕ ಚಾಲಕ ನಟರಾಜ್ ನಾಡಿನ ಜನರ ಗಮನ ಸೆಳೆದಿದ್ದಾರೆ. ಕೆಎಸ್ಆರ್ಟಿಸಿ ಬಸ್ ಏರಿದರೆ ಜ್ಞಾನ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪರಿಣಾಮ ಅನೇಕ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಚಾಲಕ ನಟರಾಜ್ಗೆ ಗೌರವ ಸನ್ಮಾನಗಳನ್ನು ನೀಡಿ ಗೌರವಿಸಿವೆ.
-ಬಸವರಾಜ ಮುದನೂರ್, ಚಿತ್ರದುರ್ಗ
Published On - 9:41 pm, Sat, 31 October 20