
‘ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆದು ಸತತ ಎರಡನೇ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ವರ್ಷ ನೀರಜ್ ಅವರಿಗೆ ಇದು ಎರಡನೇ ಚಿನ್ನದ ಪದಕವಾಗಿದೆ.

ಇದಕ್ಕೂ ಮೊದಲು ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆದಿದ್ದ ನೀರಜ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಇಂಜುರಿಯಿಂದಾಗಿ ಸುಮಾರು ಒಂದು ತಿಂಗಳು ವಿಶ್ರಾಂತಿಯಲ್ಲಿದ್ದ ನೀರಜ್ ತನ್ನ ಸುತ್ತನ್ನು ಫೌಲ್‌ನೊಂದಿಗೆ ಪ್ರಾರಂಭಿಸಿದರು. ಎರಡನೇ ಸುತ್ತಿನಲ್ಲಿ 83.52 ಮೀಟರ್ ದೂರ ಎಸೆದ ನೀರಜ್, ಮೂರನೇ ಸುತ್ತಿನಲ್ಲಿ 85.02 ಮೀಟರ್ ದೂರ ಎಸೆದರು. ಆ ಬಳಿಕ ನಾಲ್ಕನೇ ಸುತ್ತಿನಲ್ಲಿ ನೀರಜ್ ಮತ್ತೊಮ್ಮೆ ಫೌಲ್ ಮಾಡಿದರು.

ಆದರೆ ಐದನೇ ಸುತ್ತಿನಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್, ಈ ಎಸೆತದೊಂದಿಗೆ ಮೊದಲ ಸ್ಥಾನಕ್ಕೆ ಬಂದರು. ಆರನೇ ಮತ್ತು ಕೊನೆಯ ಸುತ್ತಿನಲ್ಲಿ ನೀರಜ್ 84.15 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು.

ಐದನೇ ಸುತ್ತಿನಲ್ಲಿ 87.66 ಮೀಟರ್ ದೂರ ಎಸೆದು ಪ್ರಶಸ್ತಿ ಗೆದ್ದ ನೀರಜ್ ಅವರಿಗೆ ಇದು ಎಂಟನೇ ಅಂತಾರಾಷ್ಟ್ರೀಯ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ಅವರು ಏಷ್ಯನ್ ಗೇಮ್ಸ್, ಸೌತ್ ಏಷ್ಯನ್ ಗೇಮ್ಸ್, ಒಲಿಂಪಿಕ್ ಗೇಮ್ಸ್ ಮತ್ತು ಡೈಮಂಡ್ ಲೀಗ್‌ನಂತಹ ಪಂದ್ಯಾವಳಿಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.

ಜರ್ಮನಿಯ ಜೂಲಿಯನ್ ವೆಬರ್ 87.03 ಮೀಟರ್ ದೂರ ಎಸೆದು ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು. ಅದೇ ಸಮಯದಲ್ಲಿ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜೆ 86.13 ಮೀಟರ್ ಎಸೆಯುವುದರೊಂದಿಗೆ ಮೂರನೇ ಸ್ಥಾನ ಪಡೆದರು.

ನೀರಜ್ ಹೊರತಾಗಿ , ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಕೂಡ ಈ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾರತದಿಂದ ಸ್ಪರ್ಧಿಸಿದ್ದರು. ಆದರೆ 7.88 ಮೀಟರ್‌ಗಳ ಅತ್ಯುತ್ತಮ ಜಿಗಿತದೊಂದಿಗೆ ಐದನೇ ಸ್ಥಾನಕ್ಕೆ ಮುರಳಿ ಶ್ರೀಶಂಕರ್ ತೃಪ್ತಿ ಪಡಬೇಕಾಯಿತು.
Published On - 7:26 am, Sat, 1 July 23