
ಇಂಜಿನಿಯರ್ ಆಗಿದ್ದ ಮುರುಗೇಂದ್ರಪ್ಪ ನೈಜೀರಿಯಾ, ಕೀನ್ಯಾ, ಉಗಾಂಡಾ, ಕಿಂಬರ್ಲಿ, ಘಾನಾ, ಕ್ಯೂಬಾ ಹೀಗೆ ಹತ್ತಾರು ಆಫ್ರಿಕನ್ ದೇಶಗಳನ್ನು ಸುತ್ತಿದ್ದಾರೆ. ಪ್ರತೀ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯತೆ ಪ್ರತಿನಿಧಿಸುವ ಕಲಾಕೃತಿಗಳನ್ನು ಸಂಗ್ರಹಿಸಿ ತಂದು ತಮ್ಮ ಮನೆಯನ್ನೇ ಮ್ಯೂಸಿಯಂ ಮಾಡಿದ್ದಾರೆ.

ಎರಡು ದಶಕಗಳ ಕಾಲ ನೈಜೀರಿಯಾದಲ್ಲಿ ನೆಲೆಸಿದ್ದ ದಂಪತಿ ಹಲವು ದೇಶಗಳ ಪ್ರವಾಸ ಮಾಡಿದ್ದು, 20ಕ್ಕೂ ಹೆಚ್ಚು ವಿದೇಶಿ ಕಲಾಕೃತಿಗಳ ಸಂಗ್ರಹ ಇವರ ಬಳಿಯಿವೆ. ಆಫ್ರಿಕಾದ ಸಂಸ್ಕೃತಿ ಹೇಳುವ ಮರದ ಗೊಂಬೆಗಳು ಇವುಗಳಲ್ಲಿ ವಿಶೇಷ.

ಒಂದೊಂದು ಕಲಾಕೃತಿಯೂ ಆಫ್ರಿಕಾ ಜನರ ಸೃಜನಶೀಲತೆ, ಕರಕುಶಲ ಕಲೆ ಬಗ್ಗೆ ಸಾರಿ ಹೇಳುತ್ತಿವೆ. ಜೀವನೋಪಾಯಕ್ಕಾಗಿ ಅಲ್ಲಿನ ಜನ ಇವುಗಳನ್ನ ತಯಾರಿಸಿ ಕಡಿಮೆ ವೆಚ್ಚಕ್ಕೆ ಮಾರಾಟ ಮಾಡುತ್ತಾರೆ. ಅವುಗಳನ್ನ ದಸರಾ ಸಂದರ್ಭ ಇಲ್ಲಿ ಪ್ರದರ್ಶಿಸಿದರೆ ಸ್ಥಳೀಯರಿಗೆ ಅಲ್ಲಿನ ಸಂಸ್ಕೃತಿ ಪರಿಚಯವಾಗುತ್ತದೆ ಎಂಬುದು ಮುರುಗೇಂದ್ರಪ್ಪ ದಂಪತಿ ಅಭಿಪ್ರಾಯ.

ದಸರಾ ಬೊಂಬೆ ಪ್ರದರ್ಶನದಲ್ಲಿ ಆಫ್ರಿಕನ್ ಕಲಾಕೃತಿಗಳು ಪ್ರದರ್ಶನವಾಗುತ್ತಿರುವುದು ತುಂಬಾ ಅಪರೂಪ. ಹೀಗಾಗಿ ಮುರುಗೇಂದ್ರಪ್ಪ ಹಾಗೂ ಸುಮಂಗಲಾ ಅವರ ಮನೆಯ ಈ ಎಕ್ಸಿಬಿಷನ್ ದಾವಣಗೆರೆಯಲ್ಲಿ ಮನೆ ಮಾತಾಗಿದ್ದು, ದಸರಾ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದೆ.

ವಿದೇಶಿ ಬೊಂಬೆಗಳು ಮಾತ್ರವಲ್ಲದೆ ಕರ್ನಾಟಕದ ಸ್ಥಳೀಯ ಕಲಾಕೃತಿಗಳನ್ನೂ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಚನ್ನಪಟ್ಟಣ, ಮೈಸೂರಿನ ವಿವಿಧ ಬೊಂಬೆಗಳೂ ಇಲ್ಲಿವೆ.