
ಸಿಯಾಚಿನ್ ಯುದ್ಧಭೂಮಿಗೆ ಮೈಸೂರಿನ ವಲ್ಲಭಭಾಯಿ ನಗರದ ನಿವಾಸಿ ಸುಪ್ರಿತಾ ಅವರು ಆಯ್ಕೆ ಆಗಿದ್ದಾರೆ. ಇವರು ಭಾರತೀಯ ವಾಯುಸೇನೆಯ ಕ್ಯಾಪ್ಟನ್ ಆಗಿದ್ದು, ಇದೀಗ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ.

ಇನ್ನು ತಲಕಾಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ತಿರುಮಲ್ಲೇಶ್ ಹಾಗೂ ನಿರ್ಮಲಾ ದಂಪತಿ ಪುತ್ರಿಯಾದ ಸುಪ್ರಿತಾ, ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿರುವ ಮೊದಲ ಮಹಿಳಾ ಯೋಧೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಎಲ್ಎಲ್ ಬಿ ಪದವಿ ಹಾಗೂ ಎನ್ಸಿಸಿ ಸರ್ಟಿಫಿಕೇಟ್ ಪಡೆದಿರುವ ಸುಪ್ರಿತಾ, 2021 ರಲ್ಲಿ ಸೇನಾ ಪಡೆಯ ಲೆಫ್ಟಿನೆಂಟ್ ಆಗಿ ತರಬೇತಿ ಪಡೆದು ಭಾರತೀಯ ವಾಯುಪಡೆಗೆ ನಿಯೋಜನೆಯಾಗಿದ್ದರು.

2024ರಲ್ಲಿ ಅನಂತನಾಗ್, ಜಬ್ಬಾಲ್ಬರ್, ಲೇಹ್ನಲ್ಲಿ ಕರ್ತವ್ಯ ನಿರ್ವಹಣೆಯ ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಸಿಯಾಚಿನ್ ಯುದ್ಧಭೂಮಿಗೆ ಆಯ್ಕೆಯಾಗಿದ್ದಾರೆ.

ಇಡೀ ಸಿಯಾಚಿನ್ ಪ್ರದೇಶದ ಒಡೆತನದ ಕುರಿತಂತೆ ಭಾರತ ಹಾಗು ಪಾಕಿಸ್ತಾನದ ನಡುವೆ ವಿವಾದವಿದೆ. ಎರಡೂ ರಾಷ್ಟ್ರಗಳು ಈ ಪ್ರದೇಶ ತಮಗೆ ಸೇರಿದ್ದೆಂದು ವಾದಿಸುತ್ತವೆ.

1984 ರಲ್ಲಿ ಭಾರತ "ಆಪರೇಷನ್ ಮೇಘದೂತ್" ಎಂಬ ಸೇನಾ ಕಾರ್ಯಾಚರಣೆ ನಡೆಸಿ ಸಿಯಾಚಿನ್ ನೀರ್ಗಲ್ಲು ಹಾಗು ಅದರ ಉಪನದಿಗಳ ಮೇಲೆ ಹತೋಟಿ ಪಡೆಯಿತು. ಇನ್ನು ಸಿಯಾಚಿನ್ ಪ್ರದೇಶದಲ್ಲಿ ಯುದ್ಧದಲ್ಲಿ ಮಡಿದವರಿಗಿಂತ ಅಲ್ಲಿನ ಕಠಿಣ ಹವಾಮಾನದಿಂದಾಗಿ ಹೆಚ್ಚು ಜನ ಮಡಿದ್ದಿದ್ದಾರೆ. ಇದೀಗ ಮೈಸೂರಿನ ಯುವತಿ ಇಲ್ಲಿ ಸೇವೆಗೆ ಆಯ್ಕೆ ಆಗಿದ್ದಾರೆ.
Published On - 4:34 pm, Sun, 21 July 24