ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗದಲ್ಲಿ ನಾಲ್ವರು ಜಟ್ಟಿಗಳು ಸೆಣಸಾಡಿದರು. ಮೈಸೂರಿನ ಬಲರಾಮ್ ಜಟ್ಟಿ 4ನೇ ಬಾರಿ, ಚಾಮರಾಜನಗರದ ಶ್ರೀನಿವಾಸ ಜಟ್ಟಿ 3ನೇ ಬಾರಿ, ಬೆಂಗಳೂರಿನ ನಾರಾಯಣ ಜಟ್ಟಿ 9ನೇ ಬಾರಿ, ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಮೊದಲ ಬಾರಿ ಜಟ್ಟಿ ಕಾಳಗದಲ್ಲಿ ಭಾಗಿಯಾಗಿದರು. ರಾಜಮಾತೆ ಪ್ರಮೋದಾದೇವಿ ಜಟ್ಟಿ ಕಾಳಗ ಕಣ್ತುಂಬಿಕೊಂಡರು.
ಮೈಸೂರಿನ ರಾಜಾಶ್ರಯದಲ್ಲಿ ಬೆಳೆದು ಬಂದಿರುವ ಈ ಕಾಳಗ ವಿಜಯ ದಶಮಿಯಂದು ಅದರಲ್ಲೂ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ನಡೆಯುವ ಸಾಂಪ್ರದಾಯಿಕ ಕ್ರೀಡೆ. ಕಣದಲ್ಲಿ ಜಟ್ಟಿಗಳ ರಕ್ತ ಚೆಲ್ಲಿ ರಾಜಮನೆತನಕ್ಕೆ ಜಟ್ಟಿಗಳು ತಮ್ಮ ನಿಷ್ಠೆ ಪ್ರದರ್ಶಿಸುತ್ತಾರೆ, ಬಳಿಕಷ್ಟೇ ಅರಮನೆಯಿಂದ ಜಂಬೂ ಸವಾರಿ ಹೊರಡುವುದು ಪ್ರತೀತಿ.
ಇನ್ನು ಜಟ್ಟಿ ಕಾಳಗದ ಬಳಿಕ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ನಡೆಯಿತು. ಚಿನ್ನದ ಪಲ್ಲಕ್ಕಿಯಲ್ಲಿ ಯುದ್ಧ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಅರಮನೆಯ ಆನೆ ಬಾಗಿಲಿನಿಂದ ಮೆರವಣಿಗೆ ಸಾಗಿ ಬಂದರು.
ಮೆರವಣಿಗೆಯ ಮುಂಚೂಣಿಯಲ್ಲಿ ಪಟ್ಟದ ಆನೆಗಳಾದ ಪ್ರೀತಿ, ಚಂಚಲ, ಧನಂಜಯ, ಭೀಮ ಹಾಗೂ ಪಟ್ಟದ ಹಸು, ಪಟ್ಟದ ಕುದುರೆ, ಮಂಗಳ ವಾದ್ಯದೊಂದಿಗೆ ಸಾಗಿದ್ವು. ಜೈ ಭುವನೇಶ್ವರಿ ದೇವಾಲದ ಬಳಿ ಇರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಳಿಕ ಬೆಳ್ಳಿ ಪಲ್ಲಕ್ಕಿಯಲ್ಲಿ ಸ್ವಸ್ಥಾನಕ್ಕೆ ವಾಪಸ್ ಆದ್ರು. ಬಳಿಕ ಕಂಕಣ ವಿಸರ್ಜನೆ ಮಾಡಿದರು.
ಇನ್ನೇನು ಕೆಲವೇ ಕ್ಷಣಗಳಲ್ಲಿ ಜಂಬೂ ಸವಾರಿ ಆರಂಭವಾಗಲಿದೆ. 780 ಕೆಜಿ ತೂಕದ ಚಾಮುಂಡಿ ತಾಯಿ ವಿಗ್ರಹ ಹೊರಲು ಅಭಿಮನ್ಯು ಅಂಡ್ ಟೀಂ ಸಿದ್ಧಗೊಂಡಿದೆ. ಅಂಬಾರಿ ಪಡೆ ಮೈಗೆ ಬಣ್ಣ ಬಳಿದುಕೊಂಡು ಸಜ್ಜಾಗಿದೆ. ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದೆ.