Nag Panchami 2024 : ನಾಗರ ಪಂಚಮಿಯಂದು ಭೇಟಿ ನೀಡಬಹುದಾದ ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರಗಳಿವು
ಸಾಯಿನಂದಾ | Updated By: ಅಕ್ಷಯ್ ಪಲ್ಲಮಜಲು
Updated on:
Aug 08, 2024 | 3:55 PM
ಹಿಂದೂಗಳ ಮೊದಲ ಹಬ್ಬವೇ ನಾಗರ ಪಂಚಮಿ. ಶ್ರಾವಣ ಮಾಸದ ಮೊದಲ ಹಬ್ಬವು ಉಳಿದ ಹಬ್ಬಗಳಿಗೆ ಮುನ್ನುಡಿ ಎನ್ನಲಾಗುತ್ತದೆ. ನಾಗರ ಪಂಚಮಿಯನ್ನು ಭಾರತ ಸೇರಿದಂತೆ ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲೂ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ನಾಗರ ಪಂಚಮಿಯಂದು ನಾಗಕ್ಷೇತ್ರಗಳಿಗೆ ಭೇಟಿ ನೀಡ ಬೇಕೆಂದುಕೊಂಡಿದ್ದರೆ ಕರ್ನಾಟಕದ ಈ ದೇವಾಲಯಕ್ಕೆ ತೆರಳಬಹುದು. ಆ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
1 / 6
ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನಾಗಪಂಚಮಿ ಆಗಸ್ಟ್ 9 ರಂದು ಹಬ್ಬವು ಬಂದಿದ್ದು, ಈ ದಿನ ನಾಗರಾಜನನ್ನು ಪೂಜಿಸಿ, ಹುತ್ತಕ್ಕೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಅದಲ್ಲದೇ ಈ ವಿಶೇಷ ದಿನದಂದು ಕುಟುಂಬ ಸದಸ್ಯರೊಂದಿಗೆ ನಾಗಕ್ಷೇತ್ರಗಳಿಗೆ ತೆರಳಿ ದೇವರ ಕೃಪೆಗೆ ಪಾತ್ರರಾಗಬಹುದು. ಈಗಾಗಲೇ ಕರ್ನಾಟಕದ ವಿವಿದೆಡೆ ಪ್ರಸಿದ್ಧ ಹತ್ತುಹಲವು ನಾಗಕ್ಷೇತ್ರಗಳಿದ್ದು ಕುಟುಂಬ ಸಮೇತ ಈ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಬಹುದು.
2 / 6
ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಪ್ರಸಿದ್ಧ ನಾಗ ಕ್ಷೇತ್ರವಾಗಿದ್ದು, ಇಲ್ಲಿಗೆ ರಾಜ್ಯ ಸೇರಿದಂತೆ ದೇಶದಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರ ವಿಶೇಷ ಪೂಜೆಗಳು ನಡೆಯುತ್ತದೆ. ಕಾರ್ತಿಕೇಯನನ್ನು ಸುಬ್ರಹ್ಮಣ್ಯ ಎಂದು ಪೂಜಿಸಲಾಗುವ ಈ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ವಿಶೇಷ ಪೂಜೆಗಳಿರುತ್ತದೆ.
3 / 6
ಮತ್ತಿತಾಳೇಶ್ವರ ನಾಗಕ್ಷೇತ್ರ : ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕಸಬಾ ಹೋಬಳಿ ಕಲ್ಲುವೀರನಹಳ್ಳಿ ಗ್ರಾಮದ ಮತ್ತಿ ತಾಳೇಶ್ವರ ದೇವಾಲಯ ಪ್ರಸಿದ್ಧ ಸ್ಥಳ ಆಗಿದೆ. ಪ್ರತಿ ಗುರುವಾರ ಮತ್ತು ಭಾನುವಾರ ಇಲ್ಲಿರುವ ಕೊಳದಲ್ಲಿ ಸ್ನಾನ ಮಾಡಿ ಅಡುಗೆ ಮಾಡಿ ಊಟ ಮಾಡಿದರೆ ರೋಗ ರುಜಿನಗಳು ದೂರವಾಗುತ್ತದೆ ಎನ್ನುವ ನಂಬಿಕೆಯಿದೆ. ನಾಗರ ಪಂಚಮಿಯಂದು ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.
4 / 6
ಮುಕ್ತಿ ನಾಗಕ್ಷೇತ್ರ : ಮುಕ್ತಿ ನಾಗ ಕ್ಷೇತ್ರವು ಬೆಂಗಳೂರಿನ ರಾಮೋಹಳ್ಳಿಯಲ್ಲಿದೆ. ಈ ಕ್ಷೇತ್ರದಲ್ಲಿ ವಿಶಾಲವಾದ ಮುಖ ಮಂಟಪವಿದ್ದು, ಎತ್ತರದ ಅಧಿಷ್ಠಾನವುಳ್ಳ ವೇದಿಕೆಯಿದ್ದು, ಆದಿಶೇಷನು ಮಂಡಲಾಕಾರವಾಗಿ ಹೆಡೆ ಬಿಚ್ಚಿ ಕುಳಿತಿರುವಂತೆ ಬಿಡಿಸಿರುವ ಶಿಲ್ಪವನ್ನು ಕಾಣಬಹುದು. ಸರಿಸುಮಾರು ಹದಿನಾರು ಅಡಿಯ ಏಳು ಹೆಡೆಯುಳ್ಳ ನಾಗಮೂರ್ತಿ ಇಲ್ಲಿದೆ. ಈ ದೇವಸ್ಥಾನವನ್ನು ನವಸುಬ್ರಹ್ಮಣ್ಯ ದೇವಸ್ಥಾನವೆಂದು ಕರೆಯಲಾಗುತ್ತದೆ. ಇಲ್ಲಿಗೆ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ.
5 / 6
ಕುಡುಪು ಅನಂತ ಪದ್ಮನಾಭ ನಾಗಕ್ಷೇತ್ರ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾಗಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಪ್ರಸಿದ್ಧವಾಗಿದೆ. ಈ ನಾಗ ಕ್ಷೇತ್ರವು ಮಂಗಳೂರಿನಿಂದ 10 ಕಿಮೀ ದೂರದಲ್ಲಿದೆ. ದೇವಾಲಯದ ಹಿಂಭಾಗ ನಾಗಬನವಿದ್ದು ಅಲ್ಲಿ 300 ಕ್ಕೂ ಹೆಚ್ಚು ನಾಗಪ್ರತಿಮೆಗಳಿವೆ. ನಾಗರ ಪಂಚಮಿಯಂದು ಇಲ್ಲಿ ಉತ್ಸವ ನಡೆಯುತ್ತದೆ. ಮಂಗಳೂರಿನ ಆಸುಪಾಸಿನವರಲ್ಲದೇ, ರಾಜ್ಯದಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.
6 / 6
ಮುಗ್ವಾ ಸುಬ್ರಹ್ಮಣ್ಯ ನಾಗಕ್ಷೇತ್ರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ ಸುಬ್ರಮಣ್ಯ ನಾಗಕ್ಷೇತ್ರವಿದೆ. ಈ ಕ್ಷೇತ್ರವನ್ನು ದಕ್ಷಿಣ ನಾಸಿಕಾ ಕ್ಷೇತ್ರ ಅಂದರೆ ಮೂಗುತಿ ಕ್ಷೇತ್ರ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರದಲ್ಲಿ ಅಂದುಕೊಂಡ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತದೆ. ಹೀಗಾಗಿ ನಾಗರ ಪಂಚಮಿಯ ವಿಶೇಷ ದಿನದಂದು ಈ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ.
Published On - 2:48 pm, Thu, 8 August 24