
ಉಪ್ಪಿನಕಾಯಿ: ಉಪ್ಪಿನಕಾಯಿಯನ್ನು ಯಾವುದೇ ಕಾರಣಕ್ಕೂ ಸ್ಟೀಲ್ ಪಾತ್ರೆಯಲ್ಲಿ ಸಂಗ್ರಹಿಸಬಾರದು. ಉಪ್ಪು, ಹುಳಿ, ಎಣ್ಣೆ ಇವೆಲ್ಲದರ ಮಿಶ್ರಣವಾದ ಉಪ್ಪಿನಕಾಯಿ ನೈಸರ್ಗಿಕ ಆಮ್ಲದಿಂದ ತುಂಬಿರುತ್ತದೆ. ಇವುಗಳು ಲೋಹದೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆ ಇರುತ್ತದೆ. ಇದರಿಂದ ಉಪ್ಪಿನಕಾಯಿ ಬೇಗ ಕೆಡಬಹುದು ಮತ್ತು ಅದರ ರುಚಿ ಕೂಡ ಹಾಳಾಗಬಹುದು. ಹಾಗಾಗಿ ಉಪ್ಪಿನಕಾಯಿಯನ್ನು ಗಾಜಿನ ಅಥವಾ ಪಿಂಗಾಣಿ ಜಾಡಿಯಲ್ಲಿ ಸಂಗ್ರಹಿಸಿಡುವುದು ಸೂಕ್ತ.

ಮೊಸರು: ಮೊಸರು ನೈಸರ್ಗಿಕವಾಗಿ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಇದನ್ನು ವಿಶೇಷವಾಗಿ ದೀರ್ಘ ಗಂಟೆಗಳ ಕಾಲ ಸ್ಟೀಲ್ ಪಾತ್ರೆಯಲ್ಲಿ ಸಂಗ್ರಹಿಸಿದಾಗ, ಮೊಸರಿನ ರುಚಿ ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಸರು ರುಚಿಕರವಾಗಿರಬೇಕೆಂದರೆ ಅವುಗಳನ್ನುಸೆರಾಮಿಕ್ ಅಥವಾ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ.

ನಿಂಬೆ ಮಿಶ್ರಿತ ಆಹಾರಗಳು: ನಿಂಬೆ ಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಸ್ಟೀಲ್ ಪಾತ್ರೆಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಹೀಗಿರುವಾಗ ಈ ಸಿಟ್ರಸ್ ಹಣ್ಣುಗಳ ಭಕ್ಷ್ಯವನ್ನು ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟಾಗ ಅವುಗಳ ರುಚಿ ನಕಾರಾತ್ಮಕವಾಗಿ ಬದಲಾಗಬಹುದು. ಮತ್ತು ಇವುಗಳ ಆಮ್ಲೀಯತ ಪಾತ್ರೆಯ ಕರಗುವಿಕೆಗೂ ಕಾರಣವಾಗಬಹುದು. ಹಾಗಾಗಿ ಸಿಟ್ರಸ್ ಹಣ್ಣುಗಳಾಗಿರಬಹುದು, ನಿಂಬೆ ರಸ ಸೇರಿದಂತೆ ಇತರೆ ಖಾದ್ಯಗಳೇ ಆಗಿರಬಹುದು. ಇವುಗಳನ್ನು ಗಾಜಿನ ಅಥವಾ ಉತ್ತಮ ದರ್ಜೆಯ ಪ್ಲಾಸ್ಟಿಕ್ ಡಬ್ಬಗಳಲ್ಲಿ ಸಂಗ್ರಹಿಸಿಡಬೇಕು.

ಟೊಮೆಟೊ ಮಿಶ್ರಿತ ಭಕ್ಷ್ಯಗಳು: ಟೊಮೆಟೊ ಆಗಿರಬಹುದು ಅಥವಾ ಟೊಮೆಟೊ ಮಿಶ್ರಿತ ಭಕ್ಷ್ಯಗಳೇ ಆಗಿರಬಹುದು ಇವುಗಳನ್ನು ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ. ಏಕೆಂದರೆ ಟೊಮೆಟೊ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಖಾದ್ಯದ ರುಚಿ ಮತ್ತು ಪೌಷ್ಠಿಕಾಂಶ ಎರಡೂ ಹಾಳಾಗಬಹುದು. ಹಾಗಾಗಿ ಇಂತಹ ಭಕ್ಷ್ಯಗಳನ್ನು ಸೆರಾಮಿಕ್ ಮತ್ತು ಗಾಜಿನ ಬೌಲ್‌ಗಳಲ್ಲಿ ಸಂಗ್ರಹಿಸಿ.

ಹಣ್ಣುಗಳು ಮತ್ತು ಸಲಾಡ್‌ಗಳು: ಕತ್ತರಿಸಿದ ಹಣ್ಣುಗಳಾಗಿರಬಹುದು ಅಥವಾ ಹಣ್ಣಿನ ಸಲಾಡ್‌ಗಳಾಗಿರಬಹುದು ಇವುಗಳನ್ನು ಸ್ಟೀಲ್ ಡಬ್ಬದಲ್ಲಿ ಸಂಗ್ರಹಿಸಬಾರದು. ಹೌದು ಇದರಿಂದ ಹಣ್ಣಿನಲ್ಲಿರುವ ನೀರಿನ ಅಂಶ ಹೊರ ಬರಬಹುದು ಮತ್ತು ಹಣ್ಣಿನ ರುಚಿ ಕೆಡುವ ಸಾಧ್ಯತೆಯೂ ಇದೆ. ಹಾಗಾಗಿ ಇವುಗಳನ್ನು ಗಾಜಿನ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್, ಸೆರಾಮಿಕ್ ಬೌಲ್‌ಗಳಲ್ಲಿ ಇಡಬೇಕು.

ಉಪ್ಪು: ಉಪ್ಪನ್ನು ಸಹ ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸಿಡಬಾರದು. ಇದು ಲೋಹದೊಂದಿಗೆ ಪ್ರತಿಕ್ರಿಯಿಸುವುದಿಲ್ಲವಾದರೂ, ಲೋಹದ ಪಾತ್ರೆಗಳಲ್ಲಿ ಉಪ್ಪನ್ನು ದೀರ್ಘಕಾಲ ಸಂಗ್ರಹಿಸುವುದರಿಂದ ಉಪ್ಪಿನಲ್ಲಿ ತೇವಾಂಶ ಕಾಣಿಸುತ್ತದೆ, ಉಪ್ಪಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಪಾತ್ರೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಉಪ್ಪನ್ನು ಯಾವಾಗಲೂ ಗಾಳಿಯಾದಡ ಗಾಜಿನ ಮತ್ತು ಸೆರಾಮಿಕ್ ಡಬ್ಬಗಳಲ್ಲಿ ಸಂಗ್ರಹಿಸಿಡುವುದು ಸೂಕ್ತ.