
ಗೌರವ: ಕೆಲ ಮಕ್ಕಳು ತಮಗಿಂತ ದೊಡ್ಡವರಿಗೆ ಗೌರವ ಕೊಟ್ಟು ಮಾತನಾಡುವುದಿಲ್ಲ. ಹೀಗಿರುವಾಗ ತಂದೆಯಾದವನು, ಇತರರಿಗೆ ಗೌರವ ಕೊಡುವುದು ಎಷ್ಟು ಮುಖ್ಯ, ಈ ನಮ್ಮ ಸಣ್ಣ ನಡೆ ಎಷ್ಟು ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಕಲಿಸಿಕೊಡಬೇಕು.

ಕುಟುಂಬದ ಮೌಲ್ಯ: ತಮ್ಮದೇ ಸುಂದರ ಬದುಕು ಕಟ್ಟಿಕೊಂಡ ಬಳಿಕ ತಂದೆ-ತಾಯಿಯನ್ನು ನಡು ದಾರಿಯಲ್ಲಿ ಬಿಟ್ಟುಹೋದ ಅದೆಷ್ಟೋ ಮಕ್ಕಳಿದ್ದಾರೆ. ಹೀಗಿರುವಾಗ ಪ್ರತಿಯೊಬ್ಬ ತಂದೆಯೂ ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ತಂದೆ-ತಾಯಿ ಹಾಗೂ ಕುಟುಂಬದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಕಲಿಸಿಕೊಡಬೇಕು.

ಯಶಸ್ಸಿಗೆ ಅಡ್ಡದಾರಿಯಿಲ್ಲ: ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗೆ ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ ಎಂಬುದನ್ನು ಕಲಿಸಬೇಕು. ಕಷ್ಟಪಟ್ಟರೆ ಮಾತ್ರ ಆ ಶ್ರಮಕ್ಕೆ ಪ್ರತಿಫಲ ಸಿಗುತ್ತೆ, ಯಶಸ್ಸು ಎಂಬುದು ಸಿಗುತ್ತದೆ ಎಂಬುದನ್ನು ಕಲಿಸಿಕೊಡಬೇಕು.

ಆತ್ಮವಿಶ್ವಾಸ: ಪ್ರತಿಯೊಬ್ಬ ತಂದೆಯೂ ಭಯ, ಕಷ್ಟ, ಸವಾಲುಗಳನ್ನು ಹೇಗೆ ಎದುರಿಸಿ ನಿಲ್ಲುವುದು, ಧೈರ್ಯಶಾಲಿಯಾಗಿರುವುದು ಹೇಗೆ, ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳುವುದು ಇಂತಹ ವಿಷಯಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕು.

ಜವಾಬ್ದಾರಿ: ತಂದೆಯಾದವನು ತನ್ನ ಮಕ್ಕಳಿಗೆ ಜವಾಬ್ದಾರಿಯ ಪಾಠವನ್ನು ಮಾಡಲೇಬೇಕು. ಹೌದು ಸಂಬಂಧವನ್ನು ನಿಭಾಯಿಸುವುದರಲ್ಲಿ ಆಗಿರಲಿ ಅಥವಾ ಕೆಲಸದಲ್ಲಿಯೇ ಆಗಿರಲಿ ಜವಾಬ್ದಾರಿ ಎಷ್ಟು ಮುಖ್ಯ, ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಕಲಿಸಿಕೊಡಬೇಕು.

ಮಹಿಳೆಯರಿಗೆ ಗೌರವ ಕೊಡುವುದು: ವಿಶೇಷವಾಗಿ ತಂದೆಯಾದವನು ತನ್ನ ಮಗನಿಗೆ ಮಹಿಳೆಯರಿಗೆ ಗೌರವ ಕೊಡುವುದರ ಬಗ್ಗೆ ಕಲಿಸಿಕೊಡಲೇಬೇಕು. ಹೌದು ಕೆಟ್ಟ ಭಾವನೆಯಿಂದ ಕಾಣಬಾರದು, ಆಕೆಗೆ ಗೌರವ ಕೊಡಬೇಕು ಎಂಬುದನ್ನು ಸಣ್ಣ ವಯಸ್ಸಿನಿಂದಲೇ ಹೇಳಬೇಕು.

ಪ್ರಾಮಾಣಿಕತೆ: ಪ್ರಾಮಾಣಿಕತೆಯ ವಿಷಯವನ್ನು ತಂದೆಯಾದವನು ಮಕ್ಕಳಿಗೆ ಕಲಿಸಿಕೊಡಬೇಕು. ಸ್ನೇಹ, ಪ್ರೀತಿ ಯಾವುದೇ ಸಂಬಂಧದಲ್ಲಿ ಅಥವಾ ಬದುಕಿನಲ್ಲಿ ಪ್ರಾಮಾಣಿಕತೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಕಲಿಸಬೇಕು. ಇದಲ್ಲದೆ ಶಿಸ್ತು, ಹಣಕಾಸು ನಿರ್ವಹಣೆ, ಜೀವನ ಹೇಗೆ ಸಾಗಿಸಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ವಿಚಾರಗಳ ಬಗ್ಗೆ ಮಕ್ಕಳಿಗೆ ತಂದೆಯಾದವನು ಕಲಿಸಿಕೊಡಬೇಕು.