
ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಇದೇ ಜುಲೈ 26 ರಿಂದ ವಿಶ್ವದ ಮಹಾ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಆದರೆ ಅದಕ್ಕೂ ಮುನ್ನ ಜಪಾನ್ ದೇಶಕ್ಕೆ ಹಿನ್ನಡೆಯುಂಟಾಗಿದೆ. ಜಪಾನ್ ದೇಶದ ಕಾನೂನು ಉಲ್ಲಂಘನೆ ಮಾಡಿದಕ್ಕಾಗಿ ಜಿಮ್ನಾಸ್ಟಿಕ್ ತಂಡದ ನಾಯಕಿ ಶೋಕೊ ಮಿಯಾಟಾ ಅವರನ್ನು ಈ ಕ್ರೀಡಾಕೂಟದಿಂದ ಹೊರಹಾಕಲಾಗಿದೆ.

ದೇಶದ ನೀತಿ- ನಿಯಮಗಳನ್ನು ಉಲ್ಲಂಘಿಸಿ ಧೂಮಪಾನ ಮತ್ತು ಮದ್ಯಪಾನ ಮಾಡಿದ 19 ವರ್ಷದ ಶೋಕೊ ಮಿಯಾಟಾ ಅವರನ್ನು ಜಪಾನ್ ತಂಡದಿಂದ ವಾಪಸ್ ತವರಿಗೆ ಕಳುಹಿಸಲಾಗಿದೆ. ಮೊನಾಕೊದಲ್ಲಿ ತಂಡದ ತರಬೇತಿ ಶಿಬಿರದಿಂದ ಹೊರಹಾಕಲ್ಪಟ್ಟಿರುವ ಶೋಕೊ ಇದೀಗ ದೇಶದಲ್ಲಿ ತನಿಖೆ ಎದುರಿಸಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಶೋಕೊ, ಒಲಿಂಪಿಕ್ಸ್‌ನಲ್ಲಿ ಪದಕದ ನಿರೀಕ್ಷೆ ಹೆಚ್ಚಿಸಿದ್ದರು. ಆದರೆ ನಿಯಮ ಉಲ್ಲಂಘಿಸಿದಕ್ಕಾಗಿ ಅವರು ಇದೀಗ ಭಾರಿ ಬೆಲೆ ತೆರಬೇಕಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಪಾನ್ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್, ಈ ಘಟನೆಗೆ ಸಂಬಂಧಿಸಿ ಅಭಿಮಾನಿಗಳ ಕ್ಷಮೆಯನ್ನೂ ಕೇಳಿದೆ.

ವಾಸ್ತವವಾಗಿ ಜಪಾನಿನ ಕಾನೂನಿನ ಪ್ರಕಾರ, ಇಪ್ಪತ್ತು ವರ್ಷದೊಳಗಿನ ಯಾರಾದರೂ ಮದ್ಯಪಾನ ಮತ್ತು ಧೂಮಪಾನ ಮಾಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹವಾಗಿದೆ. ಅದರಂತೆ ಶೋಕೊ ಅವರನ್ನು ಕ್ರೀಡಾಕೂಟದಿಂದ ಹೊರಹಾಕಲಾಗಿದ್ದು, ಇದೀಗ ತಂಡದಲ್ಲಿ ಐವರ ಬದಲು ನಾಲ್ವರು ಮಾತ್ರ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಈ ಕುರಿತು ಕೋಚ್ ಮುತ್ಸುಮಿ ಹರ್ದಾ ಮಾತನಾಡಿ, ಮಿಯಾತಾ ನಿರ್ಲಕ್ಷ್ಯ ವಹಿಸಿದ್ದು ನಿಜ, ಆದರೆ ಅವರ ಮೇಲೆ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಸಾಕಷ್ಟು ಒತ್ತಡವಿತ್ತು. ಕಳೆದ ಕೆಲ ದಿನಗಳಿಂದ ಆಕೆ ತೀವ್ರ ಒತ್ತಡದಲ್ಲಿ ಕಾಲ ಕಳೆಯುತ್ತಿದ್ದರು. ಹೀಗಾಗಿ ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಜನರನ್ನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ವಾಸ್ತವವಾಗಿ ಶೋಕೊ ಮಿಯಾಟಾ ಪ್ರಸ್ತುತ ಜಪಾನಿನ ರಾಷ್ಟ್ರೀಯ ಚಾಂಪಿಯನ್. ಅವರನ್ನು ಈ ಬಾರಿ ಪದಕದ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. 2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, ಆಲ್‌ರೌಂಡ್ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದ್ದರು. ಇದೀಗ ಶೋಕೊ ಅಲಭ್ಯತೆ ಒಲಿಂಪಿಕ್ಸ್‌ನಲ್ಲಿ ಮಹಿಳಾ ಜಿಮ್ನಾಸ್ಟಿಕ್ಸ್‌ನಲ್ಲಿ ಜಪಾನ್‌ನ ಪದಕ ನಿರೀಕ್ಷೆಗೂ ಹಿನ್ನಡೆಯನ್ನುಂಟು ಮಾಡಿದೆ

ಜಪಾನ್ ಕೊನೆಯದಾಗಿ 1964ರಲ್ಲಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮಹಿಳಾ ಜಿಮ್ನಾಸ್ಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಏತನ್ಮಧ್ಯೆ ಪುರುಷರ ವಿಭಾಗದಲ್ಲಿ ಜಪಾನ್ ತಂಡ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.