
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ದಾಳಿಂಬೆಯನ್ನು ಬೆಳೆಯುತ್ತಿದ್ದಾರೆ. ಉತ್ತಮ ಗುಣಮಟ್ಟದ ದಾಳಿಂಬೆ ಬೆಳೆದು ದೇಶ ವಿದೇಶಗಳಿಗೆ ರಪ್ತು ಮಾಡುತ್ತಾರೆ. ಆದರೆ, ಈ ವರ್ಷ ಮೋಡಕವಿದ ವಾತವರಣದಿಂದ ಕೆಲವು ಜಮೀನಿನಲ್ಲಿ ತಂಪು ಹೆಚ್ಚಾಗಿ ದಾಳಿಂಬೆ ತೋಟಗಳಿಗೆ ವೈರಸ್ ದಾಳಿಯಾಗಿ ಆ ಮೂಲಕ ರೈತರಿಗೆ ನಷ್ಟವಾಗಿದೆ.

ಇಂಥ ಪ್ರತಿಕೂಲ ಸಂದರ್ಭದಲ್ಲಿಯೂ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮರಸನಪಲ್ಲಿ ಗ್ರಾಮದ ಬೈಯಪ್ಪ ಎಂಬ ರೈತ, ಆರು ಎಕರೆ ಜಮೀನಿನಲ್ಲಿ ಗುಣಮಟ್ಟದ ದಾಳಿಂಬೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಸದ್ಯ ವರ್ತಕರು ತೋಟದ ಹಣ್ಣುಗಳನ್ನು 70 ಲಕ್ಷ ರೂಪಾಯಿಗೆ ಕೇಳಿದ್ದು, ಇನ್ನೂ ಹೆಚ್ಚಿನ ಬೆಲೆ ಬರುವ ನಿರೀಕ್ಷೆ ಇದೆ ಎಂದು ಬೈಯಪ್ಪ ತಿಳಿಸಿದ್ದಾರೆ.

ಇತ್ತಿಚಿಗೆ ಜಿಲ್ಲೆಯಲ್ಲಿ ದ್ರಾಕ್ಷಿ ಬದಲು ದಾಳಿಂಬೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದೆಡೆ ದಾಳಿಂಬೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು . ದಾಳಿಂಬೆಗೆ ರೋಗಬಾಧೆ ಹೆಚ್ಚು. ಹೀಗಾಗಿ ದಾಳಿಂಬೆ ಬೆಳೆ ರೈತರಿಗೆ ಹೆಚ್ಚು ಸವಾಲಿನದ್ದಾಗಿದೆ.

ಆದರೂ ಮರಸನಪಲ್ಲಿ ಗ್ರಾಮದ ಬೈಯಪ್ಪ ಎಂಬವರು, ತೋಟಗಾರಿಕೆ ತಜ್ಞರ ಸಲಹೆ ಮೇರೆಗೆ ರೋಗ ನಿರ್ವಹಣೆ ಮಾಡಿ, ಗುಣಮಟ್ಟದ ದಾಳಿಂಬೆ ಬೆಳೆದಿದ್ದಾರೆ. ಇದರಿಂದ ಬಾಂಗ್ಲಾದೇಶ, ದುಬೈ, ಮಹಾರಾಷ್ಟ್ರದ ವ್ಯಾಪಾರಿಗಳು ತೋಟಕ್ಕೆ ಭೇಟಿ ನೀಡಿ ಹಣ್ಣು ಖರೀದಿಗೆ ಮುಂದಾಗಿದ್ದಾರೆ.

ನುರಿತ ತಜ್ಞರ ಮಾರ್ಗದರ್ಶನಲ್ಲಿ ಮರಸನಪಲ್ಲಿ ಗ್ರಾಮದ ಬೈಯಪ್ಪ ಗುಣಮಟ್ಟದ ದಾಳಿಂಬೆ ಬೆಳೆದಿದ್ದಾರೆ. ಇದರ ಪರಿಣಾಮ ಅವರು ಬೆಳೆದ ಬೆಳೆಗೆ ಉತ್ತಮ ಬೇಡಿಕೆ ಬಂದಿದೆ. ಸದ್ಯ, 70 ಲಕ್ಷ ರೂಪಾಯಿ ಆದಾಯ ಗಳಿಸುವ ಭರವಸೆ ಇದ್ದು, ಸಂತಸವಾಗಿದೆ ಎಂದು ಬೈಯಪ್ಪ ತಿಳಿಸಿದ್ದಾರೆ.