
ಕೈ ಬೀಸಿ ಕರೆಯುತ್ತಿರುವ ಪ್ರಕೃತಿ, ಸುತ್ತಲೂ ನೋಡಿದರೂ ಹರಿಯುತ್ತಿರುವ ಹೇಮಾವತಿ, ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುವ ತಾಣವೇ ಹಾಸನ ಜಿಲ್ಲೆಯ ರಂಗನಾಥ ಸ್ವಾಮಿ ದೇವಾಲಯ. ಈ ಬೆಟ್ಟವು ಕಲ್ಲು ಬಂಡೆಗಳಿಂದ ಆವೃತವಾಗಿದ್ದು, ಇಲ್ಲಿನ ಪ್ರಕೃತಿಯ ಸೌಂದರ್ಯವು ಮನಸ್ಸಿಗೆ ಹಿತವೆನಿಸದೇ ಇರದು.

ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಗ್ರಾಮದಲ್ಲಿರುವ ಈ ದೇವಾಲಯವು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡಿದೆ. ಹೇಮಾವತಿ ಅಣೆಕಟ್ಟಿನ ಹಿನ್ನಿರಿನಲ್ಲಿ ರಸ್ತೆಯ ಮಾರ್ಗವಿದ್ದು ಇದರ ಮೂಲಕ ರಂಗನಾಥ ಸ್ವಾಮಿ ದೇವಾಲಯಕ್ಕೆ ತಲುಪಬಹುದು. ಇದೊಂದು ದ್ವೀಪದಂತೆ ಕಾಣಿಸುವುದು ಸಹಜ. ಇಲ್ಲಿ ಬಂದರೆ ಪ್ರಕೃತಿಯ ಸೌಂದರ್ಯವು ನಿಮ್ಮನ್ನು ಸೆಳೆಯದೇ ಇರದು.

ದೇವರ ದರ್ಶನ ಪಡೆಯಬೇಕೇನ್ನುವವರಿಗೆ ಹಾಗೂ ಚಾರಣ ಪ್ರಿಯರಿಗೂ ಇದೊಂದು ಅದ್ಭುತ ತಾಣವೆನ್ನಬಹುದು. ಅದಲ್ಲದೇ, ಇನ್ನೊಂದು ವಿಶೇಷತೆಯೆಂದರೆ ಬಂಡೆಗಳು. ಬೆಟ್ಟದ ಮೇಲಿರುವ ಬೃಹತ್ ಆಕಾರದ ಬಂಡೆಗಳು ಯಾವುದೇ ನೆರವಿಲ್ಲದೆ ನಿಂತಿರುವುದು ಒಂದು ಕ್ಷಣ ಅಚ್ಚರಿಯೆನಿಸುತ್ತದೆ.

ಪ್ರಕೃತಿಯ ಮಡಿಲಿನಲ್ಲಿ ಬೆಟ್ಟದ ತುತ್ತ ತುದಿಯಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯ ದರ್ಶನ ಪಡೆಯಬೇಕೆನ್ನುವವರು ಹಾಸನದ ಹೊಳೆನರಸೀಪುರ ತಾಲೂಕಿನ ಹಳೆಕೋಟೆಗೆ ಭೇಟಿ ನೀಡಬಹುದು. ಪ್ರಕೃತಿ ರಮಣೀಯ ಸೌಂದರ್ಯದ ನಡುವೆ ಬೆಟ್ಟದ ರಂಗನಾಥ ಎಂದು ಕರೆಯಲ್ಪಡುವ ಮಾವಿನಕೆರೆ ರಂಗನಾಥ ಸ್ವಾಮಿ ಇಲ್ಲಿ ನೆಲೆಸಿದ್ದಾನೆ.

ಇದೊಂದು ಗುಹಾಲಯ ದೇವಾಲಯವಾಗಿದ್ದು, ರಂಗನಾಥ ಸ್ವಾಮಿ ಗರ್ಭಗುಡಿಯು ಬಂಡೆಗಳ ನಡುವೆ ಇದೆ. ಇಲ್ಲಿ ನಕ್ಷತ್ರಾಕಾರದ ವಾಸ್ತು ಶೈಲಿಯನ್ನು ಇಲ್ಲಿ ಕಾಣಬಹುದು. ಗರ್ಭಗುಡಿಯಲ್ಲಿ ರಂಗನಾಥ ಕಲ್ಲಿನ ಹಿಂದೆ ಮೂರು ಅಡಿ ಎತ್ತರದ ಭಗವಂತನ ವಿಗ್ರಹವಿದೆ. ಸುತ್ತಲೂ ಹರಿಯುತ್ತಿರುವ ಹೇಮಾವತಿ ನದಿಯ ನಡುವೆ, ಬೆಟ್ಟದ ತುದಿಯಿಂದ ನಿಂತು ಸುಂದರವಾದ ನೋಟವನ್ನು ಕಣ್ತುಂಬಿಸಿಕೊಳ್ಳಬಹುದು.