
ಗಂಡ ಹೆಂಡತಿಯ ಸಂಬಂಧ ಎಲ್ಲಾ ಸಂಬಂಧಕ್ಕಿಂತಲೂ ತುಂಬಾನೇ ವಿಶೇಷ ಮತ್ತು ಅಮೂಲ್ಯವಾದದ್ದು. ಆದ್ರೆ ಕೆಲವೊಂದು ಬಾರೀ ಗಂಡ ಹೆಂಡತಿಯ ನಡುವಿನ ಜಗಳ, ಮುನಿಸು, ಮನಸ್ತಾಪಗಳಿಂದ ದಾಂಪತ್ಯದಲ್ಲಿ ವಿರಸ ಮೂಡುತ್ತವೆ. ಇದರಿಂದ ಗಂಡ ಹೆಂಡತಿಯ ಸಂಬಂಧವೇ ಹಾಳಾಗಿಬಿಡುತ್ತದೆ. ಹಾಗಿರುವಾಗ ಗಂಡ-ಹೆಂಡತಿ ಈ ಕೆಲವೊಂದು ಸರಳ ಮಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನದಲ್ಲಿ ಸದಾಕಾಲ ಸಂತೋಷ ನೆಲೆಸುವಂತೆ ನೋಡಿಕೊಳ್ಳಬಹುದು.

ಪರಸ್ಪರ ಸಮಯ ಕಳೆಯಿರಿ: ನಿಮ್ಮ ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆದರೆ ಮಾತ್ರ ನಿಮ್ಮ ದಾಂಪತ್ಯದಲ್ಲಿ ಪ್ರೀತಿ ಮತ್ತು ಸಂತೋಷ ಎಂಬುದು ಇರುತ್ತದೆ. ಕೆಲಸದ ಒತ್ತಡದಿಂದ ಸಂಗಾತಿಗಳಿಗೆ ಒಟ್ಟಿಗೆ ಸಮಯ ಕಳೆಯಲು ಕಷ್ಟಸಾಧ್ಯವಾಗುತ್ತದೆ. ಇದರಿಂದ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಸಂಗಾತಿಯೊಂದಿಗೆ ಒಟ್ಟಿಗೆ ಊಟ ಮಾಡುವುದು, ಸಿನಿಮಾ ನೋಡುವುದು ಅಥವಾ ಸುಮ್ಮನೆ ಕುಳಿತು ಹರಟೆ ಹೊಡೆಯುವಂತಹದ್ದು ಮಾಡುತ್ತಿರಿ. ಇದು ನಿಮ್ಮ ಸಂಬಂಧಕ್ಕೆ ಹೊಸತನವನ್ನು ತರುತ್ತದೆ.

ಸಂವಹನ: ಮುಖ್ಯವಾಗಿ ಗಂಡ ಹೆಂಡತಿ ಮಾತು ಬಿಡಬಾರದು. ಸಣ್ಣಪುಟ್ಟ ಜಗಳಗಳಾದಾಗ ಮಾತು ಬಿಟ್ಟು ಕುಳಿತರೆ ಅಂತಹ ಸಂದರ್ಭದಲ್ಲಿ ಸಂಬಂಧ ಇನ್ನಷ್ಟು ದೂರವಾಗಿತ್ತದೆ. ಹಾಗಾಗಿ ಇಬ್ಬರೂ ಮುನಿಸನ್ನು ಪಕ್ಕಕ್ಕಿಟ್ಟು ಪರಸ್ಪರ ಮಾತನಾಡಿಕೊಳ್ಳಬೇಕು. ಆಗ ದಾಂಪತ್ಯ ಜೀವನದಲ್ಲಿ ಸಂತೋಷ ನೆಲೆಸುತ್ತದೆ.

ಗೌರವ ಮತ್ತು ಕಾಳಜಿ: ಗಂಡ ಹೆಂತಿಯ ನಡುವೆ ಪರಸ್ಪರ ಗೌರವ, ಕಾಳಜಿ ಇದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಅಹಂಕಾರವಿಲ್ಲದೆ ಗೌರವದಿಂದ ನಡೆದುಕೊಳ್ಳುವುದು, ಮನೆ ಕೆಲಸದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ಈ ರೀತಿಯಾಗಿ ಪ್ರೀತಿ ಕಾಳಜಿ ಗಂಡ ಹೆಂಡತಿ ನಡುವೆ ಇರಲೇಬೇಕು.

ಕ್ಷಮಿಸಲು ಕಲಿಯಿರಿ: ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಅದೇ ರೀತಿ ನಿಮ್ಮ ಸಂಗಾತಿಯು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದಾಗ ಅದನ್ನು ಕ್ಷಮಿಸಲು ಕಲಿಯಿರಿ. ಒಂದು ಕ್ಷಮೆ ಸಂಗಾತಿಗಳಿಬ್ಬರ ಮನಸ್ಸನ್ನು ಹಗುರಗೊಳಿಸುತ್ತದೆ ಮತ್ತು ಸಂಬಂಧವನ್ನು ಬಲಪಡಿಸುತ್ತದೆ. ಕೋಪ ಮತ್ತು ದ್ವೇಷದಿಂದ ಸಂಬಂಧ ಹಾಳಾಗುತ್ತದೆ, ಆದರೆ ಕ್ಷಮೆ ಸಂಬಂಧದಲ್ಲಿ ಮಾಧುರ್ಯ ಮತ್ತು ಪ್ರೀತಿಯನ್ನು ತರುತ್ತದೆ.

ನಿಮ್ಮ ಸಂಗಾತಿಯ ಆಶಯಗಳಿಗೆ ಪ್ರಾಮುಖ್ಯತೆ ನೀಡಿ: ಗಂಡ ಹೆಂಡತಿ ಯಾವಾಗಲೂ ಪರಸ್ಪರ ಆಶಯ, ಅಭಿಲಾಶೆಗಳನ್ನು ಗೌರವಿಸಬೇಕು. ಜೊತೆಗೆ ನೀವು ಯಾವುದೇ ಕೆಲಸ ಮಾಡಲು ಹೋದರೆ ಖಂಡಿತವಾಗಿಯೂ ನಿಮ್ಮ ಸಂಗಾತಿಯ ಒಪ್ಪಿಗೆ ಪಡೆಯಿರಿ. ಗಂಡ ಹೆಂಡತಿಯ ನಡುವಿನ ಸಂಬಂಧದಲ್ಲಿ ತಾಳ್ಮೆ ಇರುವುದು ಬಹಳ ಮುಖ್ಯ. ಇದು ಸಂಬಂಧವನ್ನು ಮತ್ತಷ್ಟು ಬಲ ಪಡಿಸುತ್ತದೆ.

ನಂಬಿಕೆ ಇರಲಿ: ಸಂಬಂಧದಲ್ಲಿ ನಂಬಿಕೆ ಎನ್ನುವುದು ಬಹು ಮುಖ್ಯವಾಗಿ ಇರಲೇಬೇಕು. ನಂಬಿಕೆ ಇಲ್ಲದಿದ್ದರೆ ಸಂಬಂಧ ಒಡೆದು ಹೋಗುತ್ತದೆ. ಹಾಗಾಗಿ ಸಂಗಾತಿಗಳ ಮೇಲೆ ನಂಬಿಕೆ ಇಡಿ, ಇದು ಖಂಡಿತವಾಗಿಯೂ ಸಂಬಂಧವನ್ನು ಬಲಪಡಿಸುತ್ತದೆ.