
ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ ದೇವಸ್ಥಾನವು ಪಟ್ಟಣದಿಂದ 5 ಕಿ.ಮೀ ದೂರದಲ್ಲಿದೆ. ಈ ಹಿಂದೆ ಸಿದ್ಧಾಚಲ ಪರ್ವತ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ನೆಲೆಗೊಂಡಿತ್ತು, ಈಗ ಇದನ್ನು "ಯಲ್ಲಮ್ಮ ಗುಡ್ಡ" ಎಂದು ಕರೆಯಲಾಗುತ್ತದೆ.

ಲಕ್ಷಾಂತರ ಭಕ್ತರು ಹರಿದು ಬರುತ್ತಾರೆ. ಇಲ್ಲಿಗೆ ಬಂದು ತಾಯಿಯ ಬಳಿ ಬೇಡಿಕೊಂಡರೆ ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ಇದೀಗ ಬರದ ಮಧ್ಯೆಯೂ ಶಕ್ತಿದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭರಪೂರ ಕಾಣಿಕೆ ಹರಿದು ಬಂದಿದ್ದು, ಒಂದೇ ವರ್ಷದಲ್ಲಿ ಎರಡು ಕೋಟಿಗೂ ಅಧಿಕ ಕಾಣಿಕೆ ಹೆಚ್ಚಳವಾಗಿದೆ.

ಇಂದು ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ದೇಶದ ನಾನಾ ಭಾಗದ ಭಕ್ತರಿಂದ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು ದೇವಸ್ಥಾನದ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಣೆ ಮೆರೆದಿದ್ದಾರೆ.

ಈ ಮೂಲಕ 2023–24ರಲ್ಲಿ ಬರೊಬ್ಬರಿ 11.23 ಕೋಟಿ ಕಾಣಿಕೆ ಸಂಗ್ರಹವಾಗುವ ಮೂಲಕ ಎರಡು ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಹೌದು, ಕಳೆದ ವರ್ಷಕ್ಕೆ ಹೋಲಿಸಿದರೆ 2ಕೋಟಿ 40ಲಕ್ಷ ಹೆಚ್ಚಿಗೆ ಕಾಣಿಕೆ ಸಂಗ್ರಹವಾಗಿದೆ.

2023–24ರಲ್ಲಿ 10.22ಕೋಟಿ ನಗದು, 84.14ಲಕ್ಷ ಚಿನ್ನ ಮತ್ತು 16.65ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 11.23ಕೋಟಿ ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ ಕೆನಡಾ ದೇಶದ ಎರಡು ಕರೆನ್ಸಿ ನೋಟುಗಳು ಪತ್ತೆಯಾಗಿರುವುದು ಈ ಬಾರಿಯ ವಿಶೇಷವಾಗಿದೆ.

ಇನ್ನು ತಾಯಿ ಯಲ್ಲಮ್ಮ ಗುಡ್ಡದಿಂದ ಸವದತ್ತಿ ಪಟ್ಟಣದ ಸಮೀಪವಿರುವ ಮಲಪ್ರಭಾ ನದಿಯನ್ನು ನೋಡಬಹುದಾಗಿದೆ. ಜಿಲ್ಲಾ ಕೇಂದ್ರವಾದ ಬೆಳಗಾವಿಯಿಂದ ಬರೊಬ್ಬರಿ 112 ಕಿ.ಮೀ ದೂರದಲ್ಲಿದೆ.