
ಆ ಯುವಕನೇ 25 ವರ್ಷದ ಶಬ್ಬೀರ್ ಮುಲ್ಲಾ! ಈ ಯುವಕ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ದೇವಾಪುರ ಗ್ರಾಮದವ. ಬಿಕಾಂ ಪದವಿ ಪಡೆದು ಮಹಾರಾಷ್ಟ್ರದ ಪೂನಾದ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ. ಮಹಾಮಾರಿ ಕೊರೋನಾ ಕಾರಣದಿಂದ ಮನೆಯಿಂದಲೇ ಕೆಲಸ ಮಾಡಿ ಸಂಪಾದನೆ ಮಾಡುತ್ತಿದ್ದ. ಎರಡು ವರ್ಷದ ಹಿಂದೆ ಸ್ನೇಹಿತನ ಸಲಹೆಯ ಮೇರೆಗೆ ಟಗರು ಸಾಕಾಣಿಕೆಯತ್ತ ಮುಖ ಮಾಡಿದ ಶಬ್ಬೀರ್ ಮುಲ್ಲಾ ಇದೀಗ ನೂರಾರು ಟಗರುಗಳ ಸಾಕಾಣಿಕೆ ಮಾಡುತ್ತಿದ್ದಾನೆ.

ಎಲ್ಲರೂ ಮೇಕೆ ಮತ್ತು ಕುರಿಗಳ ಸಾಕಾಣಿಕೆ ಮಾಡುವ ಮೂಲಕ ಸಂಪಾದನೆ ಮಾಡುತ್ತಾರೆ. ಆದರೆ ಶಬ್ಬೀರ್ ಮಾತ್ರ ಟಗರು ಸಾಕಾಣಿಕೆಯತ್ತ ಮುಖ ಮಾಡಿದ್ಧಾರೆ! ಇಡೀ ವಿಜಯಪುರ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ಟಗರು ಸಾಕಾಣಿಕೆ ಮಾಡಿರುವ ಖ್ಯಾತಿಗೆ ಪಾತ್ರವಾಗಿದ್ದಾರೆ ಶಬ್ಬೀರ್. ಬಾಗಲಕೋಟೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಟಗರಿನ ಮರಿಗಳನ್ನು ತಂದು ಸಾಕುತ್ತಾರೆ. (ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ)

ನಿತ್ಯ ಪೌಷ್ಟಿಕಾಂಶದ ಆಹಾರ ಕಾಳು ಹಸಿ ಮೇವು ಹಾಗೂ ಒಣ ಮೇವು ನೀಡುವುದರ ಜೊತೆಗೆ ನಿಯನಿತವಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ಆರೋಗ್ಯಯುತವಾದ ಟಗರುಗಳನ್ನು ಸಾಕುತ್ತಿದ್ಧಾರೆ. ಇವರು ಸಾಕಿದ ಟಗರುಗಳು ಸರಾಸರಿ 75 ರಿಂದ 80 ಕೆಜಿ ತೂಕ ತೂಗುತ್ತಿವೆ. ಕೆಲ ಕುರಿಗಾಹಿಗಳು ಶಬ್ಬೀರ್ ಸಾಕಿರೋ ಒಂದೊಂದು ಕುರಿಗೆ 50 ಸಾವಿರ ರೂಪಾಯಿ ಕೊಟ್ಟು ಕೊಂಡೊಯ್ದಿದ್ದಾರೆ.

ಮೂರು ತಿಂಗಳ ಮರಿ ಟಗರುಗಳನ್ನು ತಂದು 6 ರಿಂದ 7 ತಿಂಗಳ ಕಾಲ ಸಾಕಲಾಗುತ್ತದೆ. ನಂತರ ಆವುಗಳನ್ನು ಮಾರಾಟ ಮಾಡುತ್ತಾರೆ. ಒಂದು ಟಗರಿಗೆ ಸರಾಸರಿ 15 ರಿಂದ 18 ಸಾವಿರ ರೂಪಾಯಿ ಖರ್ಚು ಬರುತ್ತದೆ. ಹಾಗೇಯೇ ಸದ್ಯ ಇವರು ಸಾಕಿದ ಟಗರುಗಳಿಗೆ ಸರಾಸರಿ 40 ಸಾವಿರ ರೂಪಾಯಿಗೆ ಬೇಡಿಕೆ ಬಂದಿದೆ. ಆದರೂ ಶಬ್ಬೀರ್ ಇನ್ನೂ ಹೆಚ್ಚಿನ ದರ ಬಂದರೆ ಮಾತ್ರ ಟಗರು ಮಾರಾಟ ಮಾಡುವುದಾಗಿ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುವ ಬದಲು ಟಗರು ಸಾಕುವ ತೀರ್ಮಾಣ ಮಾಡಿದಾಗ ಇವರ ಕೈಯ್ಯಲ್ಲಿ ನಯಾ ಪೈಸೆ ಇರಲಿಲ್ಲ. ವಿವಿಧ ಬ್ಯಾಂಕ್ ಗಳಿಗೆ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿ ಕೊಟ್ಟರೂ ಕಡಿಮೆ ಹಿಡುವಳಿದಾರರು ಎಂಬ ಕಾರಣದಿಂದ ಸಾಲ ಕೊಡಲೇ ಇಲ್ಲ. ಆದರೂ ಛಲ ಬಿಡದ ಶಬ್ಬೀರ್ ತಮ್ಮ ಹಿರಿಯ ಸಹೋದರ ಭಾಷಾ ಸಾಬ್ ಜೊತೆಗೂಡಿ ಹಣ ಕೂಡಿಸಿ ಟಗರು ಸಾಕಾಣಿಕೆಗೆ ಮುಂದಾದರು.

ಟಗರು ಕುರಿ ಮೇಕೆ ಸಾಕಾಣಿಕೆ ಮಾಡಲು ಆಧುನಿಕ ಶೆಡ್ ನಿರ್ಮಾಣ ಮಾಡಬೇಕು. 100 ಟಗರು ಅಥವಾ ಕುರಿ-ಮೇಕೆ ಸಾಕಲು 6 ರಿಂದ 8 ಲಕ್ಷ ರೂಪಾಯಿ ಶೆಡ್ ಗಾಗಿ ಖರ್ಚು ಮಾಡಬೇಕು. ಆದರೆ ಶಬ್ಬೀರ್ ಮುಲ್ಲಾ ಅತೀ ಕಡಿಮೆ ಅಂದರೆ 2 ರಿಂದ 2.50 ಲಕ್ಷ ರೂಪಾಯಿ ಖರ್ಚುನಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದ ಶೆಡ್ ನಿರ್ಮಾಣ ಮಾಡಿದ್ದಾರೆ. ಟಗಟರುಗಳ ಖರೀದಿಗೆ ಹೆಚ್ಚು ಹಣ ವಿನಿಯೋಗಿಸಿ ಶೆಡ್ ಗೆ ಕಡಿಮೆ ಹಣದಲ್ಲಿ ನಿರ್ಮಾಣ ಮಾಡಿ ಎಲ್ಲರೂ ಮೆಚ್ಚುವಂತೆ ಮಾಡಿದ್ದಾರೆ.

ಸದ್ಯ ಇವರು ಸಾಕಿದ ಟಗರುಗಳಿಗೆ ಬೆಂಗಳೂರು, ಚಿತ್ರದುರ್ಗ, ಮೈಸೂರು, ಭಟ್ಕಳ ಹಾಗೂ ಇತರೆ ಭಾಗಗಳಿಂದ ಬೇಡಿಕೆ ಬಂದಿದೆ. ಉತ್ತಮ ದರ ಬಂದಿದ್ದು ಮೊದಲ ಹಂತದ ಟಗರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಆರಂಭದಲ್ಲಿ ಮುಲ್ಲಾ ಕುಟುಂಬದವರ ಟಗರು ಸಾಕಾಣಿ ಬಗ್ಗೆ ತಾತ್ಸಾರವಾಗಿ ಮಾತನಾಡಿದವರೇ ಹೆಚ್ಚು. ಇದೀಗ ಇವರು ಕಡಿಮೆ ಖರ್ಚಿನಲ್ಲಿ ಉತ್ತಮ ಶೆಡ್ ಹಾಗು ಉತ್ತಮ ಟಗರುಗಳ ಸಾಕಾಣಿಕೆ ಕಂಡು ಭೇಷ್ ಎಂದಿದ್ದಾರೆ. ಜೊತೆಗೆ ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಒಟ್ಟಾರೆ ಖಾಸಗಿ ಕಂಪನಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಶಬ್ಬೀರ್ ಗೆ ಟಗರು ಕೃಷಿ ಕೈ ಹಿಡಿದಿದೆ. ಕೇವಲ 6 ರಿಂದ 8 ತಿಂಗಳು ಕಾಲ ಟಗರು ಸಾಕಾಣಿಕೆ ಮಾಡುವ ಶಬ್ಬೀರ್ ಮುಲ್ಲಾ ಕುಟುಂಬ ಒಂದೊಂದು ಟಗರಿನಿಂದ ಕನಿಷ್ಟ 15-20 ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಸ್ವಉದ್ಯೋಗ ಮಾಡುವ ಯುವಕರಿಗೆ ದೇವಾಪುರ ಗ್ರಾಮದ ಶಬ್ಬೀರ್ ಮುಲ್ಲಾ ಮಾದರಿಯಾಗಿದ್ದಾರೆ. ಟಗರು ಸಾಕಾಣಿಕೆ ಲಾಭದಾಯದ ಉದ್ಯಮೆವೆಂದು ತೋರಿಸಿಕೊಟ್ಟಿದ್ಧಾರೆ.