
ಇನ್ಸ್ಟಾ, ರೀಲ್ಸ್ ಎಂಬ ಮಾಯಾ ಲೋಕದಲ್ಲಿ ಭಕ್ತಿ ಎನ್ನುವುದು ಮಾಯವಾಗುತ್ತಿದೆ. ಹೀಗಾಗಿ ಈಗಿನ ಪೀಳಿಗೆಗೆ ಭಾರತದ ಸಂಸ್ಕೃತಿ, ಗ್ರಾಮೀಣ ಭಾಗದ ಸೊಗಡಿನ ಮಹತ್ವ ಸಾರಲು ನಿಟ್ಟಿನಲ್ಲಿ ರಾಯಚೂರಿನಲ್ಲಿ ಅದ್ಧೂರಿ ಬುತ್ತಿ ಜಾತ್ರೆ ನಡೆಯಿತು. ಸಾವಿರಾರು ಮಹಿಳೆಯರು ತಲೆ ಮೇಲೆ ಬುತ್ತಿ ಹೊತ್ತು ತಂದು, ಪರಸ್ಪರ ಹಂಚಿಕೊಂಡು ಸಾಮೂಹಿಕ ಭೋಜನ ಸವಿದರು.
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ವೀರಶೈವ ಸಮಾಜದ ವತಿಯಿಂದ ಶ್ರೀ ಕುಮಾರಶಿವಯೋಗಿ 159ನೇ ಜಯಂತಿ ಅದ್ಧೂರಿಯಾಗಿ ಆಚರಿಸಲಾಯ್ತು. ಈ ಜಯಂತಿ ಪ್ರಯುಕ್ತ ಮಹಿಳೆಯರಿಗಾಗಿ ಬಸವ ಬುತ್ತಿ ಜಾತ್ರೆ ಆಯೋಜಿಸಲಾಗಿತ್ತು.
ಈ ಬುತ್ತಿ ಜಾತ್ರೆಯಲ್ಲಿ ಭಾಗವಹಿಸಲು ಮಹಿಳೆಯರು ಅಂದವಾಗಿ ಸೀರೆಯುಟ್ಟು, ಸಿಂಗಾರಗೊಂಡು ಮಹಾಲಕ್ಷ್ಮೀ ಅಂತೆ ಮಿಂಚಿದರು. ಶೇಂಗಾ ಹೋಳಿಗೆ, ಕರ್ಜಿಕಾಯಿ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ಬುತ್ತಿ ಕಟ್ಟಿಕೊಂಡು ಸಿಂಧನೂರಿನ ಎಪಿಎಂಸಿಗೆ ಬಂದಿದ್ದರು. ನೂರಾರು ಮಹಿಳೆಯರು ತಲೆ ಮೇಲೆ ಬುತ್ತಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಇದು ಕಲ್ಯಾಣ ಕರ್ನಾಟಕದಲ್ಲಿ ಆಯೋಜಿಸಲಾಗಿದ್ದ ಮೊದಲ ಬುತ್ತಿ ಜಾತ್ರೆಯಾಗಿದೆ. ಅತ್ಯಂತ ಸಡಗರ, ಉತ್ಸಾಹದಿಂದ ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಬಸವವೃತ್ತ, ಹಳೇಬಜಾರ್, ಕಿತ್ತೂರುರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಆರ್ ಜಿಎಂ ಶಾಲಾ ಮೈದಾನಕ್ಕೆ ಮೆರವಣಿಗೆ ತಲುಪಿತು. ಈ ವೇಳೆ ವಿರಕ್ತಮಠದ ಸ್ವಾಮೀಜಿಗಳು ಬುತ್ತಿಗೆ ಸಂಕಲ್ಪ ಮಾಡಿಸಿದರು.
ಬಂಡಿಗಳ ಸದ್ದು, ಭಜನೆ ಮಂಡಳಿ, ನಾನಾ ವಾದ್ಯಗಳು ಮತ್ತು ಕಲಾ ತಂಡಗಳು ಬುತ್ತಿ ಜಾತ್ರೆಗೆ ಮತ್ತಷ್ಟು ಮೆರೆಗು ತಂದವು. ಒಟ್ಟಾರೆ ಬುತ್ತಿ ಜಾತ್ರೆ ಜನರಲ್ಲಿ ಭಕ್ತಿ ಜೊತೆಗೆ ನಾವು, ನಮ್ಮವರು ಎನ್ನುವ ಭಾವನೆ ಮೂಡಿಸಿದ್ದು ಸುಳ್ಳಲ್ಲ.