
ಕತ್ತೆ ಎಂಬ ಪ್ರಾಣಿಯನ್ನು ಅನೇಕ ಜನರು ಕೇವಲವಾಗಿ ಕಾಣುತ್ತಾರೆ. ಆದರೆ ಕೋಟೆನಾಡಿನ ಅದೊಂದು ಗ್ರಾಮದ ಜನರು ಮಾತ್ರ ಕತ್ತೆಯನ್ನು ದೇವರಂತೆ ಪೂಜಿಸುತ್ತಾರೆ. ಅಷ್ಟೇ ಅಲ್ಲ, ಕತ್ತೆ ಸಾವಿಗೀಡಾದ ವೇಳೆ ಗ್ರಾಮಸ್ಥರೆಲ್ಲಾ ಸೇರಿ ಸಮಾಧಿ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಪಕ್ಕದ ಮಲಸಿಂಗನಹಳ್ಳಿ ಗ್ರಾಮದ ತಿರುಮಲ ಆಂಜನೇಯಸ್ವಾಮಿ ದೇಗುಲದ ಉತ್ಸವ ಸಂದರ್ಭದಲ್ಲಿ ಕತ್ತೆಗೆ ಪೂಜಿಸಲಾಗುತ್ತದೆ. ವಿಶೇಷ ಉತ್ಸವದ ಸಂದರ್ಭದಲ್ಲಿ ಕತ್ತೆಯೊಂದು ತಾನಾಗಿಯೇ ಗ್ರಾಮಕ್ಕೆ ಆಗಮಿಸುತ್ತದೆಂಬ ನಂಬಿಕೆ ಇಲ್ಲಿನ ಜನರದ್ದು.

ಬರಗಾಲ ಆವರಿಸಿದ ವೇಳೆ ಕತ್ತೆಗೆ ಪೂಜೆಸುವ ವಿಶೇಷ ಆಚರಣೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಆ ವಿಶೇಷ ಆಚರಣೆಯಿಂದ ಈ ಭಾಗದ ನಾಡು ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಕಳೆದೊಂದು ವಾರದಿಂದ ಕಾಣಿಸಿಕೊಂಡಿದ್ದ ಕತ್ತೆ ಅನಾರೋಗ್ಯದಿಂದ ಸಾವಿಗೀಡಾಗಿತ್ತು. ಮಲಸಿಂಗನ ಹಳ್ಳಿಯ ತಿರುಮಲ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜಿಸಲ್ಪಡುವ ಕತ್ತೆ ಎಂಬುದಾಗಿ ನಂಬಿದ ಜನರು ಶವ ಸಂಸ್ಕಾರ ನೆರವೇರಿಸಿದ್ದಾರೆ. ಅಂತೆಯೇ ಮೂರನೇ ದಿನ ಅನ್ನಸಂತರ್ಪಣೆ ಕೂಡ ಮಾಡಲಾಗಿದೆ.

ಕತ್ತೆ ಅಂದರೆ ದೈವಸ್ವೂರಪ ಎಂದೇ ನಂಬಿರುವ ಈ ಭಾಗದ ಜನರು ಸೇಜಿ ಎಂದು ಕರೆಯುತ್ತಾರೆ. ಅಂತೆಯೇ ದೇವರೂಪದಲ್ಲಿ ಕಾಣುವ ಕತ್ತೆ ಆಕಸ್ಮಿಕವಾಗಿ ಸಾವಿಗೀಡಾದ ಕಾರಣ ಈ ಭಾಗದ ಹತ್ತು ಹಳ್ಳಿಯ ಜನರು ಸೇರಿ ಹಿಂದು ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಿದ್ದಾರೆ. ಅಲ್ಲದೆ ಪ್ರತಿವರ್ಷವೂ ಈ ದಿನ ಅನ್ನಸಂತರ್ಪಣೆ ನೆರವೇರಿಸಲು ನಿರ್ಧರಿಸಿದ್ದಾರೆ.
Published On - 8:15 pm, Sun, 2 April 23