IPL 2023: ಐಪಿಎಲ್ನ 4ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜೋಶ್ ಬಟ್ಲರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಹೆಚ್ ತಂಡವು ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಶ್ ಬಟ್ಲರ್ ಭರ್ಜರಿ ಆರಂಭ ಒದಗಿಸಿದರು. ಅದರಲ್ಲೂ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಜೋಶ್ ಬಟ್ಲರ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ವೇಳೆ ಬಟ್ಲರ್ ಬ್ಯಾಟ್ನಿಂದ 7 ಫೋರ್ ಹಾಗೂ 3 ಭರ್ಜರಿ ಸಿಕ್ಸ್ಗಳು ಮೂಡಿಬಂದಿತ್ತು. ಈ ಮೂರು ಸಿಕ್ಸ್ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ಪರ ಅತ್ಯಧಿಕ ಸಿಕ್ಸ್ ಬಾರಿಸಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ಪಟ್ಟಿಯ 2ನೇ ಸ್ಥಾನದಲ್ಲಿ ಶೇನ್ ವಾಟ್ಸನ್ ಇದ್ದರು. ವಾಟ್ಸನ್ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 109 ಸಿಕ್ಸ್ಗಳನ್ನು ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಜೋಶ್ ಬಟ್ಲರ್ ಮುರಿದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 112 ಸಿಕ್ಸ್ ಸಿಡಿಸಿರುವ ಜೋಶ್ ಬಟ್ಲರ್ ಇದೀಗ ಆರ್ಆರ್ ತಂಡದ ಸಿಕ್ಸರ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಮೊದಲ ಸ್ಥಾನದಲ್ಲಿರುವುದು ತಂಡದ ನಾಯಕ ಸಂಜು ಸ್ಯಾಮ್ಸನ್.
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದು ಒಟ್ಟು 131 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಆರ್ಆರ್ ತಂಡದ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಪವರ್ಪ್ಲೇನಲ್ಲಿ ಜೋಶ್ ಬಟ್ಲರ್ ಒಟ್ಟು 85 ರನ್ ಕಲೆಹಾಕಿದರು. ಇದು ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ಹೊಸ ದಾಖಲೆಯಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಮೊದಲ 6 ಓವರ್ಗಳಲ್ಲಿ 81 ರನ್ ಕಲೆಹಾಕಿತ್ತು. ಇದೀಗ ಎಸ್ಆರ್ಹೆಚ್ ವಿರುದ್ಧ 85 ರನ್ ಬಾರಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತನ್ನದೇ ದಾಖಲೆಯನ್ನು ನವೀಕರಿಸಿದೆ.
Published On - 5:23 pm, Sun, 2 April 23