- Kannada News Photo gallery Cricket photos IPL 2023: Kyle Mayers Smash Highest score in debut IPL innings
IPL 2023: 7 ಭರ್ಜರಿ ಸಿಕ್ಸ್, 2 ಫೋರ್: ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಮೇಯರ್ಸ್
IPL 2023 Kannada News: ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವಾಡಿದ ಮೇಯರ್ಸ್ ಕೇವಲ 38 ಎಸೆತಗಳಲ್ಲಿ 73 ರನ್ ಸಿಡಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
Updated on: Apr 02, 2023 | 2:53 PM

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ನ 3ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮೇಯರ್ಸ್ ಕೆಕೆಆರ್ ತಂಡದ ಬೌಲರ್ಗಳ ಬೆಂಡೆತ್ತಿದರು.

ಈ ಆಕ್ರಮಣಕಾರಿ ಬ್ಯಾಟಿಂಗ್ ನಡುವೆ ಕೈಲ್ ಮೇಯರ್ಸ್ 7 ಭರ್ಜರಿ ಸಿಕ್ಸ್ ಹಾಗೂ 2 ಫೋರ್ ಸಿಡಿಸಿದ್ದರು. ಅಲ್ಲದೆ ಕೇವಲ 38 ಎಸೆತಗಳಲ್ಲಿ 73 ರನ್ ಬಾರಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಕೈಲ್ ಮೇಯರ್ಸ್ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೌದು, ಐಪಿಎಲ್ನ ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ರನ್ ಬಾರಿಸಿದ 4ನೇ ಬ್ಯಾಟರ್ ಎಂಬ ದಾಖಲೆ ಇದೀಗ ಕೈಲ್ ಮೇಯರ್ಸ್ ಪಾಲಾಗಿದೆ. ಅಲ್ಲದೆ 2008 ರ ಐಪಿಎಲ್ ಬಳಿಕ ಪಾದರ್ಪಣೆ ಮಾಡಿದ ಪಂದ್ಯದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ಐಪಿಎಲ್ನ ಪಾದರ್ಪಣೆ ಪಂದ್ಯದಲ್ಲಿ ಅತ್ಯಧಿಕ ರನ್ಗಳಿಸಿದ ದಾಖಲೆ ಬ್ರೆಂಡನ್ ಮೆಕಲಂ ಹೆಸರಿನಲ್ಲಿದೆ. 2008 ರ ಐಪಿಎಲ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೆಕೆಆರ್ ಪರ ಕಣಕ್ಕಿಳಿದಿದ್ದ ಮೆಕಲಂ ಅಜೇಯ 158 ರನ್ ಬಾರಿಸಿದ ಅಬ್ಬರಿಸಿದ್ದರು. ಇದಾದ ಬಳಿಕ 2008 ರಲ್ಲೇ ಮೈಕಲ್ ಹಸ್ಸಿ (116), ಶಾನ್ ಮಾರ್ಷ್ (84) ಚೊಚ್ಚಲ ಪಂದ್ಯದಲ್ಲೇ ಸ್ಪೋಟಕ ಇನಿಂಗ್ಸ್ ಆಡಿದ್ದರು.

ಆದರೆ 2008 ರ ಐಪಿಎಲ್ ನಂತರ ಬೇರೆ ಯಾವುದೇ ಬ್ಯಾಟರ್ನಿಂದ ಪಾದರ್ಪಣೆ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್ ಮೂಡಿಬಂದಿರಲಿಲ್ಲ. ಇದೀಗ ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೈಲ್ ಮೇಯರ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವಾಡಿದ ಮೇಯರ್ಸ್ ಕೇವಲ 38 ಎಸೆತಗಳಲ್ಲಿ 73 ರನ್ ಸಿಡಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ವೆಸ್ಟ್ ಇಂಡೀಸ್ ದಾಂಡಿಗನಿಂದ ಮತ್ತಷ್ಟು ಸ್ಪೋಟಕ ಇನಿಂಗ್ಸ್ ನಿರೀಕ್ಷಿಸಬಹುದು.
