Updated on: Apr 02, 2023 | 11:03 PM
IPL 2023 RCB vs MI: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡವು ಬೌಲಿಂಗ್ ಆಯ್ದುಕೊಂಡಿತ್ತು.
ಅದರಂತೆ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಮೊದಲ ಓವರ್ನಲ್ಲಿ ನೀಡಿದ್ದು ಕೇವಲ 2 ರನ್ ಮಾತ್ರ. ಇನ್ನು 2ನೇ ಓವರ್ನಲ್ಲಿ ರೀಸ್ ಟೋಪ್ಲಿ 9 ರನ್ ಬಿಟ್ಟು ಕೊಟ್ಟಿದ್ದರು. 3ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಸಿರಾಜ್ ಕೇವಲ 1 ರನ್ ಮಾತ್ರ ನೀಡಿದರು. ಅಷ್ಟೇ ಅಲ್ಲದೆ ಇಶಾನ್ ಕಿಶನ್ ಅವರ ವಿಕೆಟ್ ಪಡೆದರು.
ಈ ವಿಕೆಟ್ನೊಂದಿಗೆ ಮೊಹಮ್ಮದ್ ಸಿರಾಜ್ ಆರ್ಸಿಬಿ ಪರ 50 ವಿಕೆಟ್ಗಳನ್ನು ಪೂರೈಸಿದರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಆರ್ಸಿಬಿಯ 6ನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ವಿನಯ್ ಕುಮಾರ್, ಅನಿಲ್ ಕುಂಬ್ಳೆ ಹಾಗೂ ಎಸ್ ಅರವಿಂದ್ ಈ ಸಾಧನೆ ಮಾಡಿದ್ದರು. ಇದೀಗ ಆರ್ಸಿಬಿ ಪರ 50 ವಿಕೆಟ್ಗಳನ್ನು 6ನೇ ಬೌಲರ್ ಆಗಿ ಮೊಹಮ್ಮದ್ ಸಿರಾಜ್ ಹೊರಹೊಮ್ಮಿದ್ದಾರೆ.
ಇನ್ನು ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಯುಜ್ವೇಂದ್ರ ಚಹಾಲ್ ಅಗ್ರಸ್ಥಾನದಲ್ಲಿದ್ದಾರೆ. 2014 ರಿಂದ 2021 ರವರೆಗೆ ಆರ್ಸಿಬಿ ಪರ 113 ಪಂದ್ಯಗಳನ್ನಾಡಿದ್ದ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲ 3 ಓವರ್ಗಳಲ್ಲಿ ಸಿರಾಜ್ ಕೇವಲ 5 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಆದರೆ ತಮ್ಮ ಕೊನೆಯ ಓವರ್ನಲ್ಲಿ 16 ರನ್ ಬಿಟ್ಟು ಕೊಟ್ಟರು. ಇದಾಗ್ಯೂ 21 ರನ್ ನೀಡಿ 1 ವಿಕೆಟ್ ಕಬಳಿಸುವ ಮೂಲಕ 4 ಓವರ್ಗಳನ್ನು ಅಂತ್ಯಗೊಳಿಸಿದರು.