
ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶವಾಗಿ 50 ವರ್ಷ ಪೂರೈಸಿದ್ದು ಒಂದು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿ ನೀಡಿದ್ದರು. ಇದಷ್ಟೇ ಮಾತ್ರವಲ್ಲದೆ ಹುಲಿ ವಾಸಕ್ಕೆ ದೇಶದ ಎರಡನೇ ಅತ್ಯುತ್ತಮ ಪ್ರದೇಶವೆಂಬ ಹೆಮ್ಮೆಯೂ ಬಂಡಿಪುರಕ್ಕೆ ಸೇರಿದೆ.

ಈ ಎಲ್ಲ ಕಾರಣಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪ್ರತಿದಿನ ಒಂದೂವರೆಯಿಂದ ಎರಡು ಸಾವಿರ ಜನ ಭೇಟಿ ನೀಡುತ್ತಿದ್ದು, ವಾರಾಂತ್ಯದಲ್ಲಿ ಸಫಾರಿಗಾಗಿ ಬರುವವರ ಸಂಖ್ಯೆ ಇನ್ನೂ ಹೆಚ್ಚಿದೆ.

ಇದರಿಂದ ಪ್ರತಿದಿನ 7ರಿಂದ 8 ಲಕ್ಷ ರೂಪಾಯಿ ಅರಣ್ಯ ಇಲಾಖೆಗೆ ಲಾಭ ಬರುತ್ತಿದೆ. ಬಂಡಿಪುರದಲ್ಲಿ 31 ಸಫಾರಿ ಜೀಪ್ ಓಡಿಸಲು ಅವಕಾಶವಿದೆ.

ಇದುವರೆಗೆ ಅರಣ್ಯ ಇಲಾಖೆ 26 ಜೀಪ್ಗಳನ್ನು ಮಾತ್ರ ಬಳಸುತ್ತಿತ್ತು. ಇತ್ತೀಚೆಗಷ್ಟೇ 2 ಜೀಪ್, 2 ಬಸ್ ಹೊಸದಾಗಿ ಬಂದಿದ್ದು ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಿದೆ.

ಜೀವನದಲ್ಲಿ ಒಮ್ಮೆಯಾದರೂ ಹುಲಿ ನೋಡಬೇಕೆಂಬುದು ಪರಿಸರ ಪ್ರಿಯರ ಆಸೆಯಾಗಿದೆ. ಅದಕ್ಕಾಗೇ ತಮಿಳುನಾಡು, ಕೇರಳ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಬರ್ತಾರೆ.

ಬಂಡಿಪುರದಲ್ಲಿ ಹುಲಿ ಮಾತ್ರವಲ್ಲದೆ ಆನೆ, ಚಿರತೆ, ಜಿಂಕೆ, ಕರಡಿ, ಉಡ ಸೇರಿದಂತೆ ಅನೇಕ ಬಗೆಯ ಪಕ್ಷಿಗಳನ್ನು ಕಾಣಬಹುದು. ಭಾರಿ ಆಸೆಯಿಂದ ಬರುವವರಿಗೆ ಅದೆಷ್ಟೋ ಸಲ ಸಫಾರಿ ಟಿಕೆಟ್ ಸಿಗದೆ ವಾಪಸ್ಸಾಗುವ ಪ್ರಸಂಗವೂ ನಡೀತಿದೆ.

ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿರೋದ್ರಿಂದ ಅದು ಗೊತ್ತಿಲ್ಲದೆ ಕೌಂಟರ್ಗೆ ಬರೋರು ವಾಪಸ್ಸಾಗುವ ಸ್ಥಿತಿ ಇದೆ. ಬಾಗಲಕೋಟೆ ಜಿಲ್ಲೆ ಇಳಕಲ್ ನಿಂದ ಬಂದಿದ್ದ ಕುಟುಂಬವೊಂದು ಸಫಾರಿ ಟಿಕೆಟ್ ಸಿಗದೆ ವಾಪಸ್ಸಾಗಿದ್ದಾರೆ. ಒಟ್ಟಿನಲ್ಲಿ ಬಂಡಿಪುರಕ್ಕೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿರುವುದು ಅರಣ್ಯ ಇಲಾಖೆಗೆ ಖುಷಿ ತಂದಿದೆ. ಇದರಿಂದ ಪ್ರವಾಸೋದ್ಯಮ ವೃದ್ಧಿಯಾಗುತ್ತಿದ್ದು ಸ್ಥಳೀಯರಿಗೆ ಉದ್ಯೋಗವು ಸಿಗುತ್ತಿದೆ.
Published On - 8:14 am, Sun, 28 May 23