Kannada News Photo gallery Karnataka News in Kannada: Tungabhadra river is empty, Gadag-Betageri twin city for drinking water crisis
ತುಂಗಭದ್ರಾ ನದಿಯ ಒಡಲು ಖಾಲಿ! ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಜಲಕ್ಷಾಮ ಆವರಿಸಿದೆ. ಕಳೆದ ಒಂದು ವಾರದಿಂದ ಹನಿ ನೀರು ಪೂರೈಕೆಯಾಗಿಲ್ಲ. ಜೀವಜಲಕ್ಕಾಗಿ ಜನರು ಗೋಳಾಟ ನಡೆಸಿದ್ದಾರೆ. ಹೌದು, ಅವಳಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಗಟಾಲೂರ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿದ್ದು, ಡೆಡ್ ಸ್ಟೋರೇಜ್ ಮುಟ್ಟಿದೆ. ಪಂಪ್ ಹೌಸ್ಗೆ ನೀರು ಹೋಗುತ್ತಿಲ್ಲ. ಹೀಗಾಗಿ ಒಂದು ವಾರದಿಂದ ನೀರು ಪೂರೈಕೆ ಬಂದ ಆಗಿದ್ದು, ರಣ ಬಿಸಿಲಿನಲ್ಲಿ ಅವಳಿ ನಗರದ ಜನರು ನೀರು ನೀರು ಅಂತಿದ್ದಾರೆ. ಬ್ಯಾರೇಜ್ ಖಾಲಿಯಾಗುವ ಮುನ್ನ ಭದ್ರಾ ಡ್ಯಾಂನಿಂದ ನೀರು ಬಿಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1 / 7
ಸೂರ್ಯನ ಪ್ರತಾಪಕ್ಕೆ ಬತ್ತಿರುವ ತುಂಗೆಯ ಒಡಲು. ಅವಳಿ ನಗರಕ್ಕೆ ಪೂರೈಕೆ ಆಗುವ ಹಮ್ಮಿಗಿ ಬ್ಯಾರೇಜ್ ಸಂಪೂರ್ಣ ಖಾಲಿ. ಡೆಡ್ ಸ್ಟೋರೇಜ್ ಮುಟ್ಟುವ ಮುನ್ಸೂಚನೆ ಇದ್ದರೂ ಸಕಾಲಕ್ಕೆ ನೀರು ಹರಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ. ಹೌದು, ಈ ದೃಶ್ಯಗಳು ಕಂಡಿದ್ದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿಯ ಸಿಂಗಟಾಲೂರ ಬ್ಯಾರೇಜ್ನಲ್ಲಿ.
2 / 7
ನದಿ ಬತ್ತಿರುವುದರಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಜಲಕ್ಷಾಮ ತಲೆದೂರಿದೆ. ಅವಳಿ ನಗರದ ಜನರು ಹನಿ ನೀರಿಗಾಗಿ ಒದ್ದಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಅವಳಿ ನಗರದ ಗಲ್ಲಿ ಗಲ್ಲಿಯಲ್ಲಿ ಜನರು ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
3 / 7
ಮೊದಲೇ ರಣ ಬಿಸಲಿನಿಂದ ಜನರು ಹೈರಾಣಾಗಿದ್ದಾರೆ. ಈ ನಡುವೆ ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ಅವಳಿ ನಗರದ 28 ವಾರ್ಡ್‌ಗಳಿಗೆ ಒಂದು ವಾರದಿಂದ ನೀರು ಬಂದಿಲ್ಲ. ಹನಿ ನೀರಿಗಾಗಿ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಮ್ಮಿಗಿ ಬ್ಯಾರೇಜ್ ಸಂಪೂರ್ಣವಾಗಿ ಖಾಲಿಯಾಗುವವರೆಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಗದಗ-ಬೆಟಗೇರಿ ನಗರಸಭೆ ಹಾಗೂ ಜಿಲ್ಲಾಡಳಿತ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
4 / 7
ನೀರಿನ ಪ್ರಮಾಣವನ್ನು ನೋಡಿಕೊಂಡು ಅಧಿಕಾರಿಗಳು ತುಂಗಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿಸಬೇಕಾಗಿತ್ತು. ಆದ್ರೆ, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಅವಳಿ ನಗರದ ಜನರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
5 / 7
ಇನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ, ಸಿಂಗಟಾಲೂರು ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಈ ಬ್ಯಾರೇಜ್ ಮೂಲಕ ಗದಗ-ಬೆಟಗೇರಿ ನಗರ ಸೇರಿದಂತೆ ಗ್ರಾಮೀಣ ಭಾಗಕ್ಕೆ ತುಂಗಭದ್ರಾ ನದಿ ನೀರು ಸರಬರಾಜು ಆಗುತ್ತದೆ. ಈ ಬ್ಯಾರೇಜ್ 3 ಎಟಿಎಂ ನೀರು ಶೇಖರಣೆ ಸಾಮರ್ಥ್ಯವನ್ನು ಹೊಂದಿದೆ. ಆದ್ರೆ, ಕೇವಲ 2 ಎಟಿಎಂ ಮಾತ್ರ ನೀರು ಶೇಖರಣೆ ಮಾಡಲಾಗುತ್ತಿದೆ. ಇದು ಕೂಡ ಜಿಲ್ಲಾಡಳಿತ ನಿರ್ಲಕ್ಷ್ಯ ಎಂದು ಜಿಲ್ಲೆಯ ಜನರು ಕೆಂಡಕಾರಿದ್ದಾರೆ.
6 / 7
ಬಿಸಿಲಿನಲ್ಲಿ ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗುತ್ತೇ ಎನ್ನುವ ಉದ್ದೇಶದಿಂದ ಭದ್ರಾ ಡ್ಯಾಂನಲ್ಲಿ ಸಾಕಷ್ಟು ನೀರು ಸ್ಟಾಕ್ ಮಾಡಲಾಗಿದೆ. ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುತ್ತೆ ಎನ್ನುವ ಕುರಿತು ನಗರಸಭೆ, ಜಿಲ್ಲಾಡಳಿತದ ಗಮನಕ್ಕೆ ಇದ್ರೂ ಯಾಕೇ ಖಾಲಿಯಾಗುವ ಮುನ್ನವೇ ನೀರು ಬಿಡಿಸುವ ವ್ಯವಸ್ಥೆ ಮಾಡಿಲ್ಲ ಎಂದು ಜನ್ರು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆ.
7 / 7
ಈ ಅವಳಿ ನಗರಕ್ಕೆ 15 ರಿಂದ 20 ದಿನಕ್ಕೆ ಒಂದು ಸಾರಿ ನೀರು ಬಿಡುತ್ತಾರೆ. ಇವಾಗ ಅವಳಿ ನಗರಕ್ಕೆ ಬ್ಯಾರೇಜ್ ಮೂಲಕ ಒಂದು ವಾರದಿಂದ ನೀರು ಸರಬರಾಜು ಆಗಿಲ್ಲ. ಮುಂದೆ ನೀರು ಬ್ಯಾರೇಜ್ ಮುಟ್ಟಿ ಜನರ ಮನೆಗೆ ಬರಬೇಕು ಅಂದರೆ 20 ರಿಂದ 30 ದಿನ ಕಳೆಯುತ್ತದೆ ಎನ್ನಲಾಗಿದೆ. ಅಲ್ಲಿವರೆಗೂ ಅವಳಿ ನಗರದ ಜನರು ಉರಿ ಬಿಸಿಲಿನಲ್ಲಿ ನೀರು ಎಂದು ಪರಿತಪಿಸಬೇಕಾಗುತ್ತದೆ. ಈ ಹಿನ್ನಲೆ ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 2:41 pm, Sat, 6 April 24