Kannada News Photo gallery Udupi: The district's famous Kambala was held in a grand manner and the Kambala lovers were happy to see the race of corners; See in photos
ಉಡುಪಿ: ಜಿಲ್ಲೆಯ ಪ್ರಸಿದ್ಧ ಕಂಬಳ ಅದ್ದೂರಿಯಾಗಿ ನಡೆದಿದ್ದು, ಕೋಣಗಳ ಓಟ ನೋಡಿ ಕಂಬಳ ಪ್ರಿಯರು ಸಂತಸ ಪಟ್ಟರು; ಫೋಟೋಗಳಲ್ಲಿ ನೋಡಿ
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Feb 27, 2023 | 4:06 PM
ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ಅಂದರೆ ಸಾಕು ರಾಜ್ಯದ ನಾನಾ ಕಡೆಯಿಂದ ವೀಕ್ಷಣೆಗಾಗಿ ಜನ ಬರುತ್ತಾರೆ. ಅದರಲ್ಲೂ ಕಟಪಾಡಿ ಈ ಕಂಬಳಕ್ಕೆ ಸಾವಿರ ವರ್ಷಗಳ ಇತಿಹಾಸವಿದ್ದು, ಜಿಲ್ಲೆಯ ಪ್ರಸಿದ್ಧ ಕಂಬಳ ಅದ್ದೂರಿಯಾಗಿ ನಡೆಯಿತು.
1 / 8
ಉಡುಪಿ ಜಿಲ್ಲೆಯ ಕಟಪಾಡಿ ಮೂಡು ಪಡು ಕಂಬಳಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಅರಸು ಮನೆತನದವರಿಂದ ಕಟಪಾಡಿ ಕಂಬಳ ಆರಂಭವಾಗಿ ನಂತರದ ದಿನಗಳಲ್ಲಿ ಮೂಡು ಪಡು ಕಂಬಳ ಹೊಸ ಆಯಾಮಗಳನ್ನು ಪಡೆದಿದೆ. ಸದ್ಯ ಹೊನಲು ಬೆಳಕಿನಲ್ಲಿ ಕಂಬಳವನ್ನು ಆಯೋಜಿಸಲಾಗುತ್ತಿದ್ದು ಸಾವಿರಾರು ಮಂದಿ ಕಂಬಳ ಪ್ರಿಯರು ಪಾಲ್ಗೊಂಡರು.
2 / 8
ಬಯಲು ಸೀಮೆಯಲ್ಲಿ ಕೃಷಿ ಭೂಮಿಯ ಉಳುಮೆಗಾಗಿ ಎತ್ತುಗಳನ್ನು ಬಳಸುವುದು ಸರ್ವೇಸಾಮಾನ್ಯ. ಆದರೆ ಕರಾವಳಿ ಭಾಗದ ಜಮೀನು ವಿಭಿನ್ನವಾಗಿದ್ದು ಉಳುಮೆ ಅತ್ಯಂತ ಕಠಿಣ. ಈ ಕಾರಣದಿಂದಲೇ ಇಲ್ಲಿನ ಉಳುಮೆಗಾಗಿ ಬಲಿಷ್ಠವಾದ ಕೋಣಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಕಂಬಳದಲ್ಲಿ ಕೋಣಗಳೇ ಪ್ರಮುಖ ಆಕರ್ಷಣೆ.
3 / 8
ವಿಶೇಷವಾಗಿ ಕಟಪಾಡಿಯ ಕಂಬಳದಲ್ಲಿ ಇಲ್ಲಿನ ದೈವಗಳಿಗೆ ಮೊದಲ ಸೇವೆ ನಡೆದ ನಂತರ ಕೋಣಗಳು ಗದ್ದೆಗೆ ಇಳಿಯುವುದು ಸಂಪ್ರದಾಯ. ಇಂದಿಗೂ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಕ್ರೀಡೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
4 / 8
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗಗಳಲ್ಲಿ ಪ್ರಮುಖ ಆಹಾರ ಬೆಳೆಯಾದ ಭತ್ತದ ಕೊಯ್ಲಿನ ನಂತರ ಮತ್ತು ಭತ್ತದ ಗದ್ದೆಯ ಉಳುಮೆಯ ನಂತರ ಬಿತ್ತನೆಯನ್ನು ನಡೆಸುವ ಪೂರ್ವದಲ್ಲಿ ಏರ್ಪಡಿಸುವ ಕ್ರೀಡೆ ಇದಾಗಿದೆ.
5 / 8
ತುಳುನಾಡಿನಲ್ಲಿ ಭೂತಾರಾಧನೆಗೆ ಅಗ್ರ ಪ್ರಾಶಸ್ತ್ಯ, ಭೂತಕ್ಕಾಗಿ ಗದ್ದೆಗಳೂ ಮೀಸಲಿದ್ದವು. ಈ ಗದ್ದೆಯ ಉಳುಮೆಯ ಅಂತ್ಯದಲ್ಲಿ ಬಳಸಲಾದ ಕೋಣಗಳನ್ನು ಮನರಂಜನೆಗಾಗಿ ಓಡಿಸುತ್ತಿದ್ದರು. ಈ ಪದ್ಧತಿಯು ಇಂದು ಜನಪದ ಕ್ರೀಡೆಯಾಗಿ ಮಾರ್ಪಾಡುಗೊಂಡಿದೆ.
6 / 8
ಜಿಲ್ಲೆಯ ಕಟಪಾಡಿ ಎಂಬ ಪ್ರದೇಶ ತುಳುನಾಡಿನ ಇತಿಹಾಸದಲ್ಲಿ, ಜಾನಪದ ಕತೆಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕೋಟಿ ಚೆನ್ನಯ, ಕಾಂತಾಬಾರೆ ಬೂದಬಾರೆ, ಬಬ್ಬುಸ್ವಾಮಿ ಮುಂತಾದ ದೈವಾಂಶ ಸಂಭೂತರ ಕತೆಗಳಲ್ಲಿ ಕಟಪಾಡಿ ಬೀಡು ಒಂದಲ್ಲ ಒಂದು ಕಾರಣದಿಂದ ಉಲ್ಲೇಖಗೊಂಡಿದೆ. ಈ ಕಾರಣದಿಂದ ಕಟಪಾಡಿಯಲ್ಲಿ ಆಯೋಜಿಸಲಾದ ಈ ಕಂಬಳಕ್ಕೆ 3 ಜಿಲ್ಲೆಗಳಿಂದ ಜನ ಆಗಮಿಸಿದ್ದರು.
7 / 8
ಒಟ್ಟಾರೆಯಾಗಿ ಕರಾವಳಿಯಲ್ಲಿ ಕಂಬಳ ಎಂಬ ಕ್ಷಣ ಜಾತ್ರೆಯ ಸಂಭ್ರಮ ಮನೆ ಮಾಡುತ್ತದೆ. ಕೋಣಗಳ ಪೈಕಿ ಅತ್ಯಂತ ಸಮರ್ಥ ಹಾಗೂ ಬಲಿಷ್ಠವಾದವುಗಳನ್ನು ಆಯ್ಕೆ ಮಾಡಿ ಅವುಗಳ ಮಧ್ಯೆ ನಿರ್ದಿಷ್ಟವಾದ ಗದ್ದೆಯಲ್ಲಿ ಓಟದ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತವಾದ ಕೋಣಗಳ ಮಾಲೀಕರನ್ನು ಸನ್ಮಾನಿಸುವುದರ ಹಿಂದೆ ಕೃಷಿಗೆ ಉತ್ತೇಜನ ನೀಡುವ ಉದ್ದೇಶವೂ ಇದೆ. ಹೀಗಾಗಿ ಈ ಹಿಂದಿನಿಂದಲೂ ಕೃಷಿಕರ ಮನೋರಂಜನೆಗಾಗಿ ಆಯೋಜಿಸಲಾಗಿದೆ ಕಂಬಳ ಇಂದಿಗೂ ತನ್ನ ಕ್ರೇಜ್ ಉಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು.
8 / 8
ಮೂರು ದಿನಗಳ ಕಾಲ ಆಯೋಜಿಸಲಾದ ಉಡುಪಿ ಇತಿಹಾಸ ಪ್ರಸಿದ್ಧ ಕಟಪಾಡಿ ಮೂಡು ಪಡು ಕಂಬಳಕ್ಕೆ ಸಾವಿರಾರು ಕಂಬಳ ಪ್ರೇಮಿಗಳು ಆಗಮಿಸಿ ಕಣ್ಣ್ತುಂಬಿಕೊಂಡರು. ಕೆಸರು ಗದ್ದೆಯಲ್ಲಿ ಕೋಣಗಳ ಓಟ ನೋಡಿ ಕಂಬಳ ಪ್ರಿಯರು ಸಂತಸ ಪಟ್ಟರು.