
ಫುಟ್ಬಾಲ್ ಪಂದ್ಯದ ನಂತರ ಇಂಡೋನೇಷ್ಯಾದ ಸ್ಟೇಡಿಯಂನಲ್ಲಿ ನಡೆದ ಭಯಾನಕ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಹಿಂಸಾಚಾರದಲ್ಲಿ ಸುಮಾರು 175 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಈಗ ಈ ಹಿಂಸಾಚಾರದ ವಿಡಿಯೋಗಳು ಮತ್ತು ಭಯಾನಕ ಚಿತ್ರಗಳು ಪ್ರಪಂಚದಾದ್ಯಂತ ವೈರಲ್ ಆಗುತ್ತಿವೆ.

ಫುಟ್ಬಾಲ್ ಪಂದ್ಯದ ನಂತರ ನಡೆದ ಹಿಂಸಾಚಾರದಲ್ಲಿ ಈ ಸಾವು ನೋವು ಸಂಭವಿಸಿದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಇಷ್ಟು ಮಂದಿ ಹೇಗೆ ಸತ್ತರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಹಿಂಸಾಚಾರದಲ್ಲಿ ಇಷ್ಟೊಂದು ಮಂದಿ ಸಾವಿಗೀಡಾಗಲು ಸಂಘಟಕರು, ಆಡಳಿತ ನಿರ್ವಹಣೆಯ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದುಬರುತ್ತಿದೆ.

ಅರೆಮಾ ಎಫ್ಸಿ ಮತ್ತು ಪೆರ್ಸೆಬಯಾ ಸುರಬಯ ಫುಟ್ಬಾಲ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸೋತ ತಂಡದ ಬೆಂಬಲಿಗರು ಏಕಾಏಕಿ ಕ್ರೀಡಾಂಗಣಕ್ಕೆ ನುಗ್ಗಿದರು.

ಮೈದಾನಕ್ಕೆ ನುಗ್ಗಿದ ಅಭಿಮಾನಿಗಳನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. ಇದರಿಂದ ಕಾಲ್ತುಳಿತ ಉಟಾಗಿದ್ದು, ಇದರಲ್ಲಿ ಹಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರಲ್ಲಿ 5 ವರ್ಷದ ಮಗುವೂ ಸೇರಿದೆ ಎಂದು ವರದಿಯಾಗಿದೆ.

ಈ ಲಾಠಿ ಚಾರ್ಜ್ನಿಂದ ತಪ್ಪಿಸಿಕೊಳ್ಳಲು ಜನರು ಒಂದೇ ಗೇಟ್‌ನಲ್ಲಿ ಜಮಾಯಿಸಿದ್ದಾರೆ. ಆದರೆ ಗೇಟ್‌ನಲ್ಲಿ ಜನಜಂಗುಳಿ ಹೆಚ್ಚಾಗಿದ್ದರಿಂದ ಆಮ್ಲಜನಕದ ಕೊರತೆಯಿಂದ ಕೆಲವರು ಗೇಟ್ ಬಳಿಯೇ ಸಾವನ್ನಪ್ಪಿದ್ದಾರೆ.

ಈ ಅವಘಡಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಈ ಪಂದ್ಯಕ್ಕೆ 42 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಆದರೆ ವಾಸ್ತವವಾಗಿ ಕ್ರೀಡಾಂಗಣದಲ್ಲಿ ಕೇವಲ 38 ಸಾವಿರ ಮಂದಿಗೆ ಮಾತ್ರ ಆಸನ ವ್ಯವಸ್ಥೆ ಇದೆ. ಹೀಗಾಗಿ ಜನಸಂದಣಿಯನ್ನು ನಿಯಂತ್ರಿಸಲೂ ಸಂಘಟಕರಿಗೆ ಸಾಧ್ಯವಾಗಿಲ್ಲ. ಈ ನಿರ್ಲಕ್ಷ್ಯವೇ ಅವಘಡಕ್ಕೆ ಪ್ರಮುಖ ಕಾರಣವೆಂಬುದು ತಿಳಿದುಬಂದಿದೆ.