ಮಾಂಸಾಹಾರಿ ಪ್ರಿಯರಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಚಿಕನ್ ಆರೋಗ್ಯಕರ ಆಹಾರವಾಗಿದ್ದು, ಅದು ಪ್ರೋಟೀನ್‌ನೊಂದಿಗೆ ದೇಹಕ್ಕೆ ಶಕ್ತಿ ತುಂಬುತ್ತದೆ. ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ಇದು ನೀಡುತ್ತದೆ. ಆದರೆ ದಿನನಿತ್ಯ ಚಿಕನ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಹೀಗಾಗಿ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ.
ಚಿಕನ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟದ ಏರಿಕೆಗೆ ಕಾರಣವಾಗುವುದಿಲ್ಲ. ಆದರೆ ಅನಿಯಮಿತ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನವು, ಬಿಳಿ ಮಾಂಸದ ಚಿಕನ್ ಕೆಂಪು ಮಾಂಸದಂತೆಯೇ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ಬೇಯಿಸಿದ ಅಥವಾ ಹುರಿದ ಚಿಕನ್ ಅನ್ನು ಸೇವಿಸುವುದು ಉತ್ತಮ.
ಚಿಕನ್ ಅನ್ನು ಉಷ್ಣಾಂಶಯುಕ್ತ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ದೇಹದ ಒಟ್ಟಾರೆ ತಾಪಮಾನವನ್ನು ಹೆಚ್ಚಿಸಬಹುದು. ಸರಳವಾಗಿ ಹೇಳುವುದಾದರೆ, ಇದು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಬೆಸಿಗೆಯ ಸಂದರ್ಭದಲ್ಲಿ ಉರಿಶೀತ ಉಂಟಾಗುವುದು, ಬಾಯಲ್ಲಿ ಹುಣ್ಣು ಹೀಗೆ ಅನೇಕ ಸಮಸ್ಯೆಗಳು ಎದುರಾಗಬಹುದು.
ಚಿಕನ್ ಹೆಚ್ಚಾಗಿ ತಿನ್ನುವುದರಿಂದ ತೂಕ ಹೆಚ್ಚಾಗುವುದು. ಚಿಕನ್ ಬಿರಿಯಾನಿ, ಬಟರ್ ಚಿಕನ್, ಚಿಕನ್ ಕಬಾಬ್ ಮತ್ತು ಇನ್ನೂ ಅನೇಕ ಆಹಾರ ಪದಾರ್ಥಗಳು ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳಾಗಿವೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅನಿಯಮಿತ ಚಿಕನ್ ಸೇವನೆ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಕೆಲವು ವಿಧದ ಚಿಕನ್ ಮೂತ್ರದ ಸೋಂಕು ಅಥವಾ ಯುಟಿಐ ಕಾಯಿಲೆಗೆ ಕಾರಣವಾಗಬಹುದು. ಅಮೇರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿಯ ಜರ್ನಲ್ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ನಿರ್ದಿಷ್ಟ ಪ್ರಮಾಣಕ್ಕೂ ಅಧಿಕವಾಗಿ ಚಿಕನ್ ಸೇವಿಸಿದರೆ ಯುಟಿಐ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.