
ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿರುವ ಝೊಜಿಲಾ ಸುರಂಗ ಮಾರ್ಗ ಕಾಮಗಾರಿಯನ್ನು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ಮಾಡಿದರು. ಈ ವೇಳೆ, MEIL ಮುಖ್ಯಸ್ಥ ಪಿ.ವಿ.ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.
ಆರಂಭಿಕ ಕಾರ್ಯಗಳು ಮುಗಿದ ನಂತರ ಈ ರಸ್ತೆಯ ಮಹತ್ವದ ಹಂತಕ್ಕೆ ಅಕ್ಟೋಬರ್ 2020ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು.
ಹೈದರಾಬಾದ್ ಮೂಲದ ಮೇಘಾ ಎಂಜಿನಿಯಿಂಗ್ ಕಂಪನಿಯು ಸುರಂಗ ನಿರ್ಮಾಣವು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಎಂಜಿನಿಯರಿಂಗ್ ನಿರ್ಮಾಣವಾಗಲಿದೆ.
ಏಷ್ಯಾದ ಅತ್ಯಂತ ಉದ್ದದ ಈ ಸುರಂಗ ಮಾರ್ಗವು ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವಋತು ಸಂಪರ್ಕ ಕಲ್ಪಿಸಲಿದೆ.
ಶ್ರೀನಗರ, ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶದಳಿಗೆ ಝೊಜಿಲಾ ಸುರಂಗವು ಸರ್ವಋತು ಸಂಪರ್ಕ ಕಲ್ಪಿಸುತ್ತದೆ.
ಚಳಿಗಾಲದಲ್ಲಿ ಭಾರೀ ಹಿಮಪಾತದ ಕಾರಣದಿಂದ ದೇಶದ ಇತರ ಪ್ರದೇಶಗಳ ಸಂಪರ್ಕ ಕಡಿದುಕೊಳ್ಳುವ ಈ ಪ್ರದೇಶಗಳಲ್ಲಿ ನಿರಂತರ ರಸ್ತೆ ಸಂಪರ್ಕದ ಸಾಧ್ಯತೆಯನ್ನು ಮುಕ್ತವಾಗಿರಿಸುತ್ತದೆ.
6800 ಕೋಟಿ ವೆಚ್ಚದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ 2018ರಲ್ಲಿ ಶಿಲಾನ್ಯಾಸ ಮಾಡಿದ್ದರು.
ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿ ಈ ರಸ್ತೆಯನ್ನು ನಿರ್ಮಿಸುವುದು ದೊಡ್ಡ ಸವಾಲಾಗಿದೆ. ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಈ ರಸ್ತೆ ನಿರ್ಮಾಣದ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.
ಕಾರ್ಗಿಲ್ ಮತ್ತು ಲಡಾಖ್ ಪ್ರದೇಶದ ಜನರು ಕಳೆದ 30 ವರ್ಷಗಳಿಂದಲೂ ಈ ರಸ್ತೆ ನಿರ್ಮಾಣವಾಗಬೇಕು ಎಂದು ಬೇಡಿಕೆಯಿಟ್ಟಿದ್ದರು.
ಗಿರಿ ಶಿಖರಗಳ ಮಾರ್ಗದಲ್ಲಿ ಸರಕು ಸಾಗಣೆಗೆ ಕೆಟ್ಟ ಹವಾಮಾನವು ದೊಡ್ಡ ಸವಾಲಾಗಿತ್ತು. ಹೀಗಾಗಿ ಸುರಂಗ ಮಾರ್ಗ ನಿರ್ಮಾಣವಾಗಬೇಕು ಎಂದು ಜನರು ಕೋರುತ್ತಿದ್ದರು.
2013ರ ಯುಪಿಎ ಆಡಳಿತದಲ್ಲಿಯೇ ಈ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಕರೆಯಲಾಗಿತ್ತು. ಕೊನೆಗೆ ಮೋದಿ ಅಧಿಕಾರ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿತು.
ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಖ್ಯಾತಿ ಪಡೆದಿದೆ. ಕೇವಲ ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿದ ಹೊಸ ದಾಖಲೆ ಬರೆಯಲಿದೆ ಎಂದು ಹೇಳಿದ್ದರು.
ಸುರಂಗಕ್ಕಾಗಿ ಆರಂಭದಲ್ಲಿ ₹ 10,643 ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ರಸ್ತೆ ಮತ್ತು ಸುರಂಗವನ್ನು ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ ₹ 3,835 ಕೋಟಿ ಉಳಿತಾಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
ಈ ಅತ್ಯಾಧುನಿಕ ಸುರಂಗದಲ್ಲಿ ಸಿಸಿಟಿವಿ ಕ್ಯಾಮೆರಾ, ಅತಿ ಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿಯ ಕರೆಗಂಟೆ ಸೇರಿದಂತೆ ಹಲವು ಸೌಕರ್ಯಗಳು ಈ ಸುರಂಗದಲ್ಲಿದೆ. ಈ ಸುರಂಗದಲ್ಲಿ ಸಂಚಾರಕ್ಕೆ ಗಂಟೆಗೆ 80 ಕಿಮೀ ವೇಗಮಿತಿ ವಿಧಿಸಲಾಗಿದೆ.