ದೇಶದಲ್ಲೇಡೆ ರಾಜ್ಯದ 40% ಕಮಿಷನ್ ಸರ್ಕಾರದ ಬಗ್ಗೆ ಚರ್ಚೆ: ಬೊಮ್ಮಾಯಿ ಪೇ ಸಿಎಂ ಎಂದ ಸುರ್ಜೇವಾಲ

|

Updated on: Mar 02, 2023 | 7:07 PM

ಇಡೀ ದೇಶದಲ್ಲೇ ರಾಜ್ಯದ 40% ಕಮಿಷನ್ ಸರ್ಕಾರದ ಬಗ್ಗೆ ಚರ್ಚೆಯಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಒಬ್ಬ ಪೇ ಸಿಎಂ ಎಂದು ಎಲ್ಲಾ ಕಡೆ ಕರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ಮಾಡಿದರು.

ದೇಶದಲ್ಲೇಡೆ ರಾಜ್ಯದ 40% ಕಮಿಷನ್ ಸರ್ಕಾರದ ಬಗ್ಗೆ ಚರ್ಚೆ: ಬೊಮ್ಮಾಯಿ ಪೇ ಸಿಎಂ ಎಂದ ಸುರ್ಜೇವಾಲ
ರಣದೀಪ್ ಸಿಂಗ್ ಸುರ್ಜೇವಾಲ
Image Credit source: ndtv.com
Follow us on

ಮಂಗಳೂರು: ಇಡೀ ದೇಶದಲ್ಲೇ ರಾಜ್ಯದ 40% ಕಮಿಷನ್ ಸರ್ಕಾರದ ಬಗ್ಗೆ ಚರ್ಚೆಯಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಒಬ್ಬ ಪೇ ಸಿಎಂ ಎಂದು ಎಲ್ಲಾ ಕಡೆ ಕರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (randeep singh surjewala) ವಾಗ್ದಾಳಿ ಮಾಡಿದರು. ಮಂಗಳೂರಿನಲ್ಲಿ ದ‌ಕ್ಷಿಣ ಕನ್ನಡ ಜಿಲ್ಲಾ ‌ಕಾಂಗ್ರೆಸ್ ಪ್ರಮುಖ ನಾಯಕರ ಸಭೆಯಲ್ಲಿ ಮಾತನಾಡಿ, ಸಿಎಂ ಬೊಮ್ಮಾಯಿ ಬೇರೆ ರಾಜ್ಯಕ್ಕೆ ಹೋದಾಗಲೂ ಕಮಿಷನ್ ಸರ್ಕಾರದ ಪೋಸ್ಟರ್ ಹಾಕಿ ಸ್ವಾಗತ ಮಾಡುತ್ತಾರೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ 40% ಕಮಿಷನ್ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೆ ಪ್ರಧಾನಿ ಮೋದಿ ಕಮಿಷನ್ ಆರೋಪದ ಬಗ್ಗೆ ಮಾತನಾಡಿಲ್ಲ. ಬೆಳಗಾವಿಗೆ ಪ್ರಧಾನಿ ಮೋದಿ ಬಂದರೂ ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಹೋಗಿಲ್ಲ ಎಂದು ಕಿಡಿಕಾರಿದರು.

ರಾಜ್ಯವನ್ನು ಲೂಟಿ ಮಾಡೋದು ನಿಲ್ಲಿಸಿ

ಸ್ವಂತ ಪಕ್ಷದ ಕಾರ್ಯಕರ್ತನನ್ನೇ ಲೂಟಿದವರು ಇನ್ನು ರಾಜ್ಯದ ಜನರನ್ನ ಬಿಡುತ್ತಾರಾ ಎಂದು ಪ್ರಶ್ನಿಸಿದರು. ನಾನು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸಂತೋಷ್ ಪಾಟೀಲ್ ಮನೆಗೆ ಹೋಗಿದ್ದೆವು. ಈ ವೇಳೆ ಅವರ ಮನೆಯವರು ಕಮಿಷನ್ ನಿಂದ ಸಂತೋಷ್ ಮೃತಪಟ್ಟಿರುವುದಾಗಿ ಅಳಲು ತೋಡಿಕೊಂಡರು. ನಾನು ಬೊಮ್ಮಾಯಿ, ಯಡಿಯೂರಪ್ಪ ಮತ್ತು ನಳಿನ್ ಕುಮಾರ್​ಗೆ ಸವಾಲು ಹಾಕ್ತಿದೇನೆ. ನಿಮಗೆ ಬೇಕಾದ ಹಣ ಬೇಡಿ ನಾವು ಕೊಡ್ತೇವೆ. ಆದರೆ ನೀವು ರಾಜ್ಯವನ್ನು ಲೂಟಿ ಮಾಡೋದು ನಿಲ್ಲಿಸಿ ಎಂದರು.

ಇದನ್ನೂ ಓದಿ: ಪರಮೇಶ್ವರ್​ ಸೋಲಿಸಿಲ್ಲ ಎಂದು ಸಿದ್ದರಾಮಯ್ಯ ಆಣೆ ಮಾಡಲಿ: ಕೆ ಎಸ್​​ ಈಶ್ವರಪ್ಪ ಸವಾಲು

ಡಬಲ್ ಭ್ರಷ್ಟಾಚಾರ ಸರ್ಕಾರ

ತುಮಕೂರು ಎಂಎಲ್​ಎ 90 ಲಕ್ಷ ಕಮಿಷನ್ ಪಡೆದ ಬಗ್ಗೆ ಸಾಕ್ಷ್ಯ ಇದೆ ಅಂತ ಗುತ್ತಿಗೆದಾರರ ಸಂಘ ಹೇಳ್ತಿದೆ. ಗದಗ ಮಠದ ದಿಂಗಾಲೇಶ್ವರ ಸ್ವಾಮೀಜಿಯೇ ಲಂಚದ ಆರೋಪ ಮಾಡಿದ್ದಾರೆ. ಮಠಕ್ಕೆ ಅನುದಾನ ಬಿಡುಗಡೆ ಮಾಡಲು 30% ಕಮಿಷನ್ ಕೇಳಿದ್ದಾರೆ ಅಂತ ದೂರಿದ್ದಾರೆ. ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬಲ್ ಭ್ರಷ್ಟಾಚಾರ ಸರ್ಕಾರ. ಬಿಜೆಪಿ ಶಾಸಕ ಯತ್ನಾಳ್ ಸಿಎಂ ಸ್ಥಾನ ಎರಡೂವರೆ ಸಾವಿರ ಕೋಟಿಗೆ ಮಾರಾಟವಿದೆ ಅಂತ ಹೇಳಿದ್ದಾರೆ. ಯತ್ನಾಳ್ ಮೇಲೆ ಮೋದಿ, ಶಾ, ನಡ್ಡಾ ಕ್ರಮ ಕೈಗೊಂಡಿಲ್ಲ. ಅವರು ಸುಳ್ಳು ಹೇಳಿದ್ರೆ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಬೊಮ್ಮಾಯಿ ಎಷ್ಟು ಹಣ ಕೊಟ್ಟಿದ್ದಾರೆ ಹೇಳಲಿ ಎಂದು ಹೇಳಿದರು.

ಬಿಜೆಪಿ ಈಗ ನಿಮ್ಮ ಮಕ್ಕಳ ಭವಿಷ್ಯ ಹರಾಜಿಗಿಡುವ ಕೆಲಸ ಮಾಡುತ್ತಿದೆ. ಒಬ್ಬ ಎಡಿಜಿಪಿ ಪಿಎಸ್ಸೈ ‌ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ. ಹಾಗಾದ್ರೆ ಅವರೊಬ್ಬರೇ ಭ್ರಷ್ಟಾಚಾರ ಮಾಡಿದ್ದಾ ಎಂದು ಪ್ರಶ್ನಿಸಿದರು. ಆ ಅವಧಿಯಲ್ಲಿ ಇದೇ ಬೊಮ್ಮಾಯಿ ಗೃಹ ಸಚಿವ ಆಗಿದ್ರು. ಹಾಗಾದರೆ ಈ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ತನಿಖೆ ನಡೆಸೋರು ಯಾರು? ಬಿಜೆಪಿ ಸರ್ಕಾರ ಇಡೀ ಕರ್ನಾಟಕ ರಾಜ್ಯವನ್ನು ‌ಮಾರಾಟಕ್ಕೆ ಇಟ್ಟಿದೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಚುನಾವಣೆ ಘೋಷಣೆ ಬಳಿಕ ಪ್ರಿಯಾಂಕಾ, ರಾಹುಲ್​ರಿಂದ ರಾಜ್ಯದಲ್ಲಿ ಪ್ರಚಾರ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್​ನ ತ್ಯಾಗ ‌ಮತ್ತು ಸಂಸ್ಕೃತಿ ಬಿಜೆಪಿಯವರಿಗೆ ಇನ್ನೂ ಗೊತ್ತಿಲ್ಲ. ಅಶ್ವಥ್ ನಾರಾಯಣ್ ಸಂಸ್ಕೃತಿ ನಾಥೋರಾಮ್ ಗೋಡ್ಸೆ ಮನಸ್ಥಿತಿ ಸೂಚಿಸುತ್ತದೆ. ಗಾಂಧೀಜಿ ಹುತಾತ್ಮರಾದರೂ ಅವರು ನಮ್ಮ ಹೃದಯದಲ್ಲಿ ಇದ್ದಾರೆ. ಇಂದಿರಾಗಾಂಧಿ ಕೂಡ ಇಂತಹ ಹಿಂಸೆಯಲ್ಲಿ ಮೃತಪಟ್ಟರೂ ಅವರು ನಮ್ಮ ಹೃದಯದಲ್ಲಿದ್ದಾರೆ. ರಾಜೀವ್ ಗಾಂಧಿಯವರನ್ನೂ ಇದೇ ರೀತಿ ಹಿಂಸೆ ಮೂಲಕ ಕೊಂದರು. ಆದರೂ ರಾಜೀವ್ ಗಾಂಧಿ ಇಂದಿಗೂ ಎಲ್ಲರ ಹೃದಯದಲ್ಲಿ ಇದ್ದಾರೆ. ಅಶ್ವಥ್ ನಾರಾಯಣ್​ರ ಮನಸ್ಥಿತಿಯಂತೆ ಪಂಜಾಬ್ ಮತ್ತು‌ ಮಧ್ಯಪ್ರದೇಶದ ಮುಖ್ಯಮಂತ್ರಿಗಳನ್ನ ಕೊಲ್ಲಲಾಯಿತು. ಆದರೂ ಈ ಎರಡೂ ಭಾಗಗಳಲ್ಲಿ ಜನರು ಒಗ್ಗಟ್ಟಾಗಿ ಬದುಕುತ್ತಿದ್ದಾರೆ.

ಬಿಜೆಪಿಯ ಒಬ್ಬನೇ ಒಬ್ಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇತಿಹಾಸ ಇದ್ಯಾ ಎಂದು ಪ್ರಶ್ನಿಸಿದರು. ಬಿಜೆಪಿಯವರು ಹೆಚ್ಚು ‌ಮಾತನಾಡ್ತಾರೆ, ಆದರೆ ಕಾಂಗ್ರೆಸ್​ನವರು ತ್ಯಾಗ ಮಾಡ್ತಾರೆ. ಅವರು ನಮ್ಮ ನಾಯಕರನ್ನ ಕೊಲ್ಲಲು, ಅವಮಾನಿಸಲು ಯಾಕೆ‌ ಮುಂದಾಗಿದ್ದಾರೆ ಗೊತ್ತಾ? ಅವರಿಗೆ ಸೋಲಿನ ಭಯ ಕಾಡ್ತಿದೆ, ಇದು ಮೋದಿ ಮತ್ತು ಅಮಿತ್ ಶಾ, ಬೊಮ್ಮಾಯಿಗೂ ಗೊತ್ತಿದೆ.
ಹಿಂಸೆ ಹೇಡಿಗಳ ಒಂದು ಸೋಲಿನ ಸಂಕೇತವಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:07 pm, Thu, 2 March 23