ಶಿವಮೊಗ್ಗ: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ (BJP) ಮುಂದಿನ ರಾಜ್ಯಾಧ್ಯಕ್ಷರು ಯಾರು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಮಾಜಿ ಸಿಎಂ ಬಸವರಾ ಬೊಮ್ಮಾಯಿ (Basavaraj Bommai), ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿದ್ದು, ಮಾಜಿ ಸಚಿವ ವಿ.ಸೋಮಣ್ಣ ಕೂಡ ಪತ್ರ ಬರೆದಿದ್ದಾರೆ. ಈ ನಡುವೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರ ಹೆಸರು ಕೂಡ ಪ್ರಸ್ತಾಪವಾಗಿದೆ.
ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಆದ ಸೋಲಿನ ಬಗ್ಗೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ ನಮ್ಮ ಪಕ್ಷದ ನಾಯಕರು ಪಕ್ಷವನ್ನು ಕಟ್ಟಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಮನೆ ಬಗ್ಗೆ ಯೋಚಿಸದೆ ಪಕ್ಷ ಕಟ್ಟಿದ್ದಾರೆ. ಈಗ ಅವರು ಕಣ್ಣೀರು ಹಾಕುತ್ತಾರೆ. ಸೋಲಿನಿಂದ ಧೃತಿಗೆಟ್ಟು ಪರಸ್ಪರ ಕೆಸರೆರಚಾಡಿಕೊಳ್ಳುವುದು ಸರಿಯಲ್ಲ. ಬದಲಿಗೆ ಪಕ್ಷದ ವೇದಿಕೆಯಲ್ಲಿ ಸೋಲಿನ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದರು.
ಸೋಲನ್ನು ನಾವು ಸರಿಯಾದ ರೀತಿಯಲ್ಲಿ ಸ್ವೀಕರಿಸಬೇಕು ಎಂದ ಮಾಜಿ ಗೃಹಸಚಿವರು, ಈ ಸೋಲು ಕೆಲವರನ್ನು ಅಲ್ಲಾಡಿಸಿದೆ, ಆದರೆ ಬಿಜೆಪಿಯನ್ನು ಅಲ್ಲಾಡಿಸಿಲ್ಲ. ಬಿಜೆಪಿಯವರಿಗೆ ಹಿಂದೆ ಸೋಲು ಸ್ವಾಭಾವಿಕ, ಗೆಲುವು ಆಕಸ್ಮಿಕವಾಗಿತ್ತು. ನಾವು ಸೋತಾಗ ಯಾವಾಗಲೂ ಧೃತಿಗೆಟ್ಟಿಲ್ಲ. ಹೀಗಿರುವಾಗ ಕೆಎಸ್ ಈಶ್ವರಪ್ಪ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು.
ಬಿಟ್ ಕಾಯಿನ್ ಹಗರಣ ಕುರಿತು ಮರು ತನಿಖೆ ಮಾಡಲಿ. ತಪ್ಪಿತಸ್ಥರು ಯಾರೇ ಆಗಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಪಿಎಸ್ಐ ಹಗರಣದ ತನಿಖೆ ಈಗಾಗಲೇ ಮುಕ್ತಾಯವಾಗಿದೆ. ಹಗರಣಕ್ಕೆ ಸಂಬಂಧಿಸಿದ ಆರೋಪಿಗಳೆಲ್ಲರೂ ಜೈಲಿನಲ್ಲಿದ್ದಾರೆ. ತನಿಖಾಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಕೋರ್ಟ್ನಲ್ಲೇ ಎಲ್ಲವೂ ನಿರ್ಧಾರವಾಗಲಿದೆ ಎಂದರು. ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ಅವಧಿಯ ಎಲ್ಲ ಯೋಜನೆಗಳ ಬಗ್ಗೆ ತನಿಖೆ ನಡೆಸಲಿ. ಅದನ್ನು ಬಿಟ್ಟು ಏನೋ ಮಾಡುತ್ತೇವೆ ಎಂದು ಹೆದರಿಸುವುದಲ್ಲ, ಮೊದಲು ತನಿಖೆ ನಡೆಸಲಿ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಕೂಡಲೇ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದಿಂದ ನೀಡುವ ಐದು ಕೆಜಿ ಅಕ್ಕಿ ಈ ತಿಂಗಳ ಕೊನೆವರೆಗೂ ನೀಡಲಿದ್ದೇವೆ. ರಾಜ್ಯ ಸರ್ಕಾರ ತನ್ನ ಪಾಲಿನ ಅಕ್ಕಿಯನ್ನು ಕೂಡಲೇ ನೀಡಲಿ. ಇಲ್ಲದಿದ್ದಲ್ಲಿ ವಿಧಾನಸೌಧದ ಒಳಗೆ ಹೊರಗೆ ಹೋರಾಟ ನಡೆಸುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ