ಮಂಗಳೂರು, (ಫೆಬ್ರವರಿ, 05): ಪುತ್ತಿಲ ಪರಿವಾರ ಕಟ್ಟಿಕೊಂಡು ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹಿಂದೂ ಕಾರ್ಯಕರ್ತ ಅರುಣ್ ಪುತ್ತಿಲ(Arun Kumar puttila) ಅವರು ಇದೀಗ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ. ಆದ್ರೆ, ಇಂದು ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರ(puttila parivar) ಸಮಾಲೋಚನಾ ಸಭೆಯಲ್ಲಿ, ಬಿಜೆಪಿ ಜತೆ ವಿಲೀನಕ್ಕೆ ಹಲವು ಷರತ್ತುಗಳನ್ನು ಹಾಕಿದೆ. ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹಿಂದೂ ಕಾರ್ಯಕರ್ತ ಅರುಣ್ ಪುತ್ತಿಲ ಹಾಗೂ ಪುತ್ತಿಲ ಪರಿವಾರ ಬೇಡಿಕೆ ಇಟ್ಟಿದೆ.
ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವುದು ಪರಿವಾರದ ಪ್ರಧಾನ ಬೇಡಿಕೆ. ಜತೆಗೆ ಪದಾಧಿಕಾರಿಗಳಲ್ಲೂ ಅವಕಾಶ ನೀಡಬೇಕು ಎಂದು ಕೋರಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಾಪ್ ಗ್ರೂಪ್ ಗಳಲ್ಲಿ 4,23,400 ಜನ ಬೆಂಬಲಿಗರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೇ ದೊಡ್ಡ ಸಂಗತಿಯೇ ಇಲ್ಲ, ವ್ಯವಸ್ಥೆಗಳ ಅಗತ್ಯವೂ ಇಲ್ಲ. ಆದರೂ ಅದನ್ನು ಬಿಟ್ಟು ಬಿಜೆಪಿ ಜತೆ ಕೈಜೋಡಿಸಲು ಮುಂದಾಗಿದ್ದೇವೆ. ನಾವೆಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ರಕ್ತವನ್ನು ಬೆವರು ಮಾಡಿ ಮಾತೃ ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ ನಡೆಯಬೇಕು ಇದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನ ತೆಗೊಂಡಿದ್ದಾರೆ ಅವರ ನಿರ್ಧಾರಕ್ಕೆ ನಾನು ಕಟಿಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಾತೃ ಪಕ್ಷದವರು ಈ ಬಗ್ಗೆ ಸೂಕ್ತ ನಿರ್ಧಾರ ಮೂರು ದಿನಗಳೊಳಗೆ ಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧವಾಗಿದೆ. ಕಾರ್ಯಕರ್ತರ ಭಾವನೆಗಳಿಗೆ ಸೂಕ್ತವಾದ ನಿರ್ಧಾರವನ್ನು ಮಾತೃ ಪಕ್ಷ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪುತ್ತೂರಿನಲ್ಲಿ ನಡೆದ ವಿದ್ಯಾಮಾನಗಳು ಇಡೀ ರಾಜ್ಯದಲ್ಲಿ ನಡೆಯಲಿದೆ ಎಂದು ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.