ವಿಜಯಪುರ, ಡಿಸೆಂಬರ್ 25: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಶಕುನಿ ಇದ್ದ ಹಾಗೆ. ಅವರು ಏನು ಹೇಳುತ್ತಾರೆ ಅದು ಉಲ್ಟಾ ನಡೆದಿರುತ್ತದೆ. ಈ ಹಿಂದೆ ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷೆಯಾಗಲಿ ಎಂದಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ವಿಪಕ್ಷ ನಾಯಕರಾಗಲು ನಮ್ಮ ಅಭ್ಯಂತರವಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದರು. ಅಷ್ಟರಲ್ಲಿ ಹೈಕಮಾಂಡ್ನಲ್ಲಿ ಎಲ್ಲಾ ಪ್ಯಾಕ್ ಮಾಡಿಕೊಂಡು ಬಂದಿದ್ದರು. ಬಿಎಸ್ ಯಡಿಯೂರಪ್ಪ ನನ್ನ ವಿರುದ್ಧ ದೂರು ನೀಡಿದ್ದಾರೆ. ನನ್ನ ವಿರುದ್ಧ ದೂರು ನೀಡಿದರೂ ಅವರದ್ದು ಏನೂ ನಡೆಯುತ್ತಿಲ್ಲ. ಮರ್ಯಾದೆ ಹೋಗಬಾರದು ಎಂದು ದೂರು ನೀಡಿಲ್ಲ ಅಂತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ವಿಜಯಪುರ ನಗರದಲ್ಲಿ ವಾಜಪೇಯಿ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯತ್ನಾಳ್ ಮೂರನೇ ಟಿಪ್ಪು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ನಾನು ಮೂರನೇ ಟಿಪ್ಪು ಆದರೆ ಎಂ.ಬಿ.ಪಾಟೀಲ್ ನಾಲ್ಕನೇ ಟಿಪ್ಪು ಸುಲ್ತಾನ್ ಎಂದು ಟಾಂಗ್ ಕೊಟ್ಟರು.
ಹಿಜಾಬ್ ಆದೇಶ ವಾಪಸ್ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಹಾಗೂ ಯೂ ಟರ್ನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಇದೇ ರೀತಿ ಡ್ರೆಸ್ ಇರಬೇಕು ಎಂದು ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಇಡಿ ದೇಶದಲ್ಲಿ ಎಲ್ಲಿಯೂ ಈ ವಿಷಯ ಇಲ್ಲ, ಕರ್ನಾಟಕದಲ್ಲಿ ಯಾಕೆ? ಇದು ಇವರೇ ತೆಗೆದಿದ್ದು, ಈ ವಿಚಾರ ಕಾಂಗ್ರೆಸ್ಗೆ ಲೋಕಸಭೆಯಲ್ಲಿ ನಿಶ್ಚಿತವಾಗಿ ಮುಳುವಾಗುತ್ತದೆ ಎಂದರು.
ಈ ರೀತಿ ಕೋಮು ಆಧಾರದ ಮೇಲೆ ಮಕ್ಕಳನ್ನು ಒಡೆಯುವಂತದ್ದು ಮಾಡುತ್ತೀರಿ. ದಲಿತರು, ಹಿಂದುಳಿದವರ ಮಕ್ಕಳಿಗೆ ಪ್ರವಾಸಕ್ಕೆ ಕಳುಹಿಸಲಾಗುತ್ತದೆ. ಬಡವರು ಸೇರಿದಂತೆ ಎಲ್ಲಾ ಮಕ್ಕಳಿಗೂ ಕಳಿಸಬೇಕು, ಆಗ ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ನೀವು ಪ್ರತ್ಯೇಕ ಕಳಿಸುವುದರಿಂದ ಪ್ರತ್ಯೇಕತೆ ಉದ್ಭವಾಗುತ್ತದೆ. ಎಲ್ಲಾ ಸಮುದಾಯದ ಮಕ್ಕಳು ಕೂಡಿ ಓದಬೇಕು, ಕೂಡಿ ಊಟ ಮಾಡಬೇಕು, ಕೂಡಿ ಆಟವಾಡಬೇಕು. ಅಂದಾಗ ಮಾತ್ರ ಸಮಾನತೆ ಬರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಯತ್ನಾಳ್ ಮಾತನ್ನ ಯಾರೂ ಗಂಭೀರವಾಗಿ ತೆಗೆದುಕೊಳ್ಳಲ್ಲ, ದೀಪ ಆರುವಾಗ ಜಾಸ್ತಿ ಉರಿಯುತ್ತೆ: ಮುರುಗೇಶ್ ನಿರಾಣಿ
ಪ್ರಧಾನಿ ಮೋದಿ ಅವರು 2024ರ ಚುನಾವಣೆ ಒಳಗೆ ಅಥವಾ ಚುನಾವಣೆ ಬಳಿಕ ಸಮಾನ ನಾಗರಿಕತೆಯನ್ನು ಜಾರಿಗೆ ತರಬಹುದು. ನಮ್ಮ ದೇಶದಲ್ಲಿ ಸಮಾನ ನಾಗರಿಕತೆ ತರಬೇಕು ಎಂದು ಸುಪ್ರೀಂ ಕೋರ್ಟ್ ಸಹ ಸಲಹೆ ಕೊಟ್ಟಿದೆ. ಎಲ್ಲರಿಗೂ ಅನುಕೂಲವಾಗುವಂತಹ ಸಮಾನ ನಾಗರಿಕತೆ ಭಾರತದಲ್ಲಿ ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ ಎಂದು ಭವಿಷ್ಯ ನುಡಿದರು.
ರೈತರ ಬರಗಾಲ ಬಯಸುತ್ತಾರೆಂದು ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಇದು ದುರ್ಧೈವ, ಯಾಕಂದರೆ ಶಿವಾನಂದ ಪಾಟೀಲ್ ಈ ಹಿಂದೆ ರೈತರ ಆತ್ಮಹತ್ಯೆ ಬಗ್ಗೆನೂ ಮಾತನಾಡಿದ್ದರು. ಇವತ್ತು ಬರಗಾಲವನ್ನು ರೈತರು ಬಯಸುತ್ತಾರೆ ಅಂತ ಹೇಳಿದ್ದಾರೆ. ಇದನ್ನು ಯಾವ ರೀತಿ ಖಂಡನೆ ಮಾಡಬೇಕು ಗೊತ್ತಾಗುತ್ತಿಲ್ಲ. ಒಬ್ಬ ಜವಾಬ್ದಾರಿಯುತ ಮಂತ್ರಿಗಳು, ಅದರಲ್ಲಿಯೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ರೈತರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಬಾರದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ