ರೆಸಾರ್ಟ್ನಲ್ಲಿ ಶಾಮನೂರು ಶಿವಶಂಕರಪ್ಪ ಭೇಟಿಯಾಗಿದ್ಯಾಕೆ? ಕಾರಣ ಕೊಟ್ಟ ಬೊಮ್ಮಾಯಿ
ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಹಸ್ಯ ಸಭೆ ರಾಜ್ಯ ರಾಜಕಾರನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಬಗ್ಗೆ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ (BJP) ಹಿರಿಯ ನಾಯಕರು ಕಾಂಗ್ರೆಸ್ (Congress) ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಪ್ರತಾಪ ಸಿಂಹ ಹಾಗೂ ಸಿಟಿ ರವಿ ಹೇಳಿಕೆ ನೀಡಿರುವುದು ಕಮಲ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಇದರ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ರಹಸ್ಯ ಮಾತುಕತೆ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಉಭಯ ನಾಯಕರ ಫೋಟೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಬೊಮ್ಮಾಯಿ, ಶಮನೂರು ಭೇಟಿಯಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹೊಂದಾಣಿಕೆ ರಾಜಕಾರಣದ ಗದ್ದಲದ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ, ಬೊಮ್ಮಾಯಿ ರಹಸ್ಯ ಸಭೆ
ಬೆಂಗಳೂರಿನಲ್ಲಿ ಇಂದು(ಜೂನ್ 14) ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಬೊಮ್ಮಾಯಿ, ಶಾಮನೂರು ಶಿವಶಂಕರಪ್ಪ ಹಿರಿಯರು, ದೂರದ ಸಂಬಂಧಿಯೂ ಹೌದು. ಈ ಹಿಂದೆಯೂ ಹಲವು ಬಾರಿ ನಮ್ಮ ಮನೆಯಲ್ಲಿ ಭೇಟಿಯಾಗಿದ್ದೇವೆ. ಶಾಸಕ ಶಾಮನೂರು ಭೇಟಿಗೆ ರಾಜಕಾರಣ ಬೆರೆಸುವುದು ಸೂಕ್ತವಲ್ಲ. ಶಿಗ್ಗಾಂವಿಯಿಂದ ಬರುವಾಗ ಹೋಟೆಲ್ಗೆ ನಾನು ಊಟಕ್ಕೆ ಹೋಗಿದ್ದೆ. ಶಾಮನೂರು ಮೊಮ್ಮಕ್ಕಳ ಹೊಸ ಸಂಬಂಧ ಬಗ್ಗೆ ಚರ್ಚಿಸಲು ಸೇರಿದ್ದರು. ಆಗ 10 ನಿಮಿಷಗಳ ಕಾಲ ಉಭಯ ಕುಶಲೋಪರಿ ಮಾತುಕತೆ ಆಗಿದೆ ಎಂದು ಸ್ಪಷ್ಟಪಡಿಸಿದರು.
ಶಾಮನೂರು ಜತೆ ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಸ್ನೇಹ ಸಂಬಂಧ ಬೇರೆ, ರಾಜಕೀಯ ಸಂಬಂಧವೇ ಬೇರೆ. ನನ್ನ ರಾಜಕೀಯ ನಿಲುವಿನಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಿಎಂ ಬೊಮ್ಮಾಯಿ ಅವರು ನಿನ್ನೆ(ಜೂನ್ 13) ದಾವಣಗೆರೆ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಭೇಟಿ ಮಾಡಿದ್ದು, 25 ನಿಮಿಷಗಳ ಕಾಲ ರಹಸ್ಯ ಮಾತುಕತೆ ಮಾಡಿದ್ದರು. ನಿನ್ನೆ ಸಂಜೆ ಶಾಮನೂರು ಶಿವಶಂಕರಪ್ಪ ಅವರನ್ನ ಬೊಮ್ಮಾಯಿ ಅವರು ದಾವಣಗೆರೆ ನಗರದ ಹೊರವಲಯದ ಪುಣೆ ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಅಪೂರ್ವ ರೆಸಾರ್ಟ್ಗೆ ಕರೆಸಿಕೊಂಡು ಗುಪ್ತ್-ಗುಪ್ತ್ ಚರ್ಚೆ ನಡೆಸಿದ್ದರು. ಉಭಯ ನಾಯಕರ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.