ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ನಿರ್ಮಾಣ ಮಾಡಿರುವ ಬಿಬಿಸಿ ಸಾಕ್ಷ್ಯಚಿತ್ರದ (BBC documentary) ಬಗ್ಗೆ ಬಹಳ ಚರ್ಚೆ ಆಗುತ್ತಿದ್ದೆ. ಭಾರತ ಸರ್ಕಾರ ಇದರ ಮೇಲೆ ನಿಷೇಧ ಹೇರಿದ್ದರೂ ಕೆಲವು ರಾಜ್ಯಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಪ್ರಸಾರ ಮಾಡಲಾಗುತ್ತಿದೆ. ಈ ಸಾಕ್ಷ್ಯ ಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಬಿಸಿ ಸಾಕ್ಷ್ಯ ಚಿತ್ರ ನಿರ್ಮಾಣದ ಹಿಂದೆ ತುಕ್ಡೆ ಗ್ಯಾಂಗ್ ಮತ್ತು ಮೋದಿ ವಿರೋಧಿ ಶಕ್ತಿಗಳು ಸಾಥ್ ನೀಡಿವೆ. ಭಾರತದ ಅಭಿವೃದ್ಧಿ, ಮೋದಿ ಯಶಸ್ಸು ಸಹಿಸದವರು ಹೀಗೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿಯವರು ಅತ್ಯಂತ ಲೋಕಪ್ರಿಯ ನಾಯಕ ಅಂತ ಹಲವು ಸರ್ವೆಗಳು ಹೇಳಿವೆ. ಕೋವಿಡ್ ಲಸಿಕೆ, ಯೋಗದ ಮೂಲಕ ಭಾರತದ ಲೋಕಪ್ರಿಯತೆಯನ್ನ ಜಗತ್ತಿಗೆ ತೋರಿಸಿದ್ದಾರೆ. ಈಗ ಸಾಕ್ಷ್ಯಚಿತ್ರಕ್ಕೆ ಆ್ಯಂಟಿ ಮೋದಿ ಗ್ಯಾಂಗ್ಗಳ ಸಹಕಾರ ಪಡೆಯಲಾಗಿದೆ. ನಾನಾವತಿ, ಷಾ ಕಮಿಟಿಗಳ ವರದಿಯನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಿಲ್ಲ. ಮೋದಿಯವರ ಪಾತ್ರ ಇಲ್ಲ ಅಂತ ಸಾಬೀತಾದ ಮೇಲೂ ಪಿತೂರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಸುಪ್ರೀಂಕೋರ್ಟ್ ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರ ಇಲ್ಲ ಅಂತ ಕ್ಲೀನ್ ಚಿಟ್ ಕೊಟ್ಟಿತ್ತು. ಇಷ್ಟಾದರೂ ಈಗ ಈ ಸಾಕ್ಷ್ಯಚಿತ್ರ ತಂದಿರುವುದರ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಆ್ಯಂಟಿ ಮೋದಿ ಗ್ಯಾಂಗ್, ರಾಜಕೀಯ ವಿರೋಧಿಗಳು, ತುಕ್ಡೇ ಗ್ಯಾಂಗ್ ಸೇರಿ ರೂಪಿಸಿಸಿರುವ ಪಿತೂರಿ ಇದಾಗಿದೆ. ವಿದೇಶಿಯರು ಭಾರತದ ಹೆಸರು ಹಾಳಾಗಬೇಕು ಅಂತ ಕಾಯುತ್ತಿದ್ದಾರೆ ಎಂದರು.
ಇದನ್ನೂ ಓದಿ: CT Ravi: ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಕೊಡಲು ಸಿದ್ಧ; ಸಿಟಿ ರವಿ
ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ಮೋದಿ ಉತ್ತಮ ಬಾಂಧವ್ಯ, ಸಹಕಾರ ಸಂಬಂಧ ಹೊಂದಿದ್ದಾರೆ. ಭಾರತದ ಜೊತೆಗೂ ಸಂಬಂಧ ಉತ್ತಮವಾಗಿದೆ. ಇದನ್ನು ಕೆಲವು ಜಾಗತಿಕ ಶಕ್ತಿಗಳು ಸಹಿಸಿಕೊಳ್ಳುತ್ತಿಲ್ಲ. ಭಾರತದ ಶಕ್ತಿವೃದ್ಧಿ ಸಹಿಸದ ಅಂತಾರಾಷ್ಟ್ರೀಯ ಶಕ್ತಿಗಳ ಜೊತೆ ನಮ್ಮ ತುಕ್ಡೇ ಗ್ಯಾಂಗ್, ಆ್ಯಂಟಿ ಮೋದಿ ಟೀಂ ಸೇರಿ ಪಿತೂರಿ ನಡೆಸಿವೆ. ಆ ಸಾಕ್ಷ್ಯ ಚಿತ್ರ ನಾನು ನೋಡಿಲ್ಲ. ಆದರೆ ನಾನು ತಿಳಿದುಕೊಂಡ ಪ್ರಕಾರ ಈ ತುಕ್ಡೇ ಗ್ಯಾಂಗ್ನವರನ್ನೇ ಆ ಸಾಕ್ಷ್ಯಚಿತ್ರದಲ್ಲಿ ಮಾತಾಡಿಸಲಾಗಿದೆ ಎಂದರು.
ಮಂಡ್ಯ ಉಸ್ತುವಾರಿ ಸಚಿವ ಅಶೋಕ್ ವಿರುದ್ಧ ಗೋ ಬ್ಯಾಕ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಅಶೋಕ್ ಅವರು ನಮ್ಮ ಪಕ್ಷದ ಹಿರಿಯ ನಾಯಕ. ಯಾರೋ ವಿರೋಧಿಸುತ್ತಾರೆಂದು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಇದರ ಹಿಂದೆ ಯಾರು ಇದ್ದಾರೆ, ಅವರ ಹಿನ್ನಲೆ ಏನು ಎಂದು ನಾವು ತಿಳಿದುಕೊಳ್ಳುತ್ತೇವೆ. ಅಶೋಕ್ ಅವರಿಗೆ ವಿರೋಧ ಬರುತ್ತಿದೆ ಅನ್ನೋದಕ್ಕಿಂತ ಅವರನ್ನು ದೊಡ್ಡ ಪ್ರಮಾಣದಲ್ಲಿ ಸ್ವಾಗತವನ್ನೂ ಮಂಡ್ಯ ಕಾರ್ಯಕರ್ತರು ಮಾಡಿಕೊಂಡರು, ಸ್ವಾತಗವನ್ನು ನಾವು ನೋಡಿದ್ದೇವೆ ಎಂದರು.
ಭವಾನಿ ರೇವಣ್ಣರನ್ನು ಬಿಜೆಪಿಗೆ ಆಹ್ವಾನ ಮಾಡಿದ್ದು ತಮಾಷೆಗೆ, ಅದನ್ನೇ ಗಂಭೀರವಾಗಿ ಪರಿಗಣಿಸಬಾರದು ಎಂದು ಸಿ.ಟಿ.ರವಿ ಹೇಳಿದ್ದಾರೆ. ನೀವೇ ಹೇಳಿದ್ದೀರಿ ಅಂತಾ ಬಿಜೆಪಿಗೆ ಬಂದು ಟಿಕೆಟ್ ಕೇಳಬೇಡಿ. ನನ್ನ ಬಗ್ಗೆ ಆಕ್ರೋಶ ಭಾವನೆ ಬೇಡ, ನಾನು ಜೆಡಿಎಸ್ ಹೈಕಮಾಂಡ್ ಅಲ್ಲ. ಜೆಡಿಎಸ್ ಹೈಕಮಾಂಡ್ ಅವರ ಮನೆಯಲ್ಲೇ ಇದ್ದಾರೆ. ಅವರದ್ದು ಮನೆ ಜಗಳ ಅಂತಾ ನಾನು ಹೇಳಿದರೆ ತಪ್ಪಾಗುತ್ತದೆ ಎಂದರು.
ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪ್ರೀತಂಗೌಡ ಜನಪ್ರಿಯತೆ ಹೆಚ್ಚಾಗಿದೆ, ಜನ ಪ್ರೀತಂಗೌಡ ಪರವಿದ್ದಾರೆ. ಜೆಡಿಎಸ್ನಿಂದ ಯಾರೇ ಅಭ್ಯರ್ಥಿ ಕಣಕ್ಕಿಳಿದರೂ ಪ್ರೀತಂಗೌಡ ಗೆಲ್ಲುತ್ತಾರೆ. ಹೀಗಾಗಿ ಭವಾನಿ ಅಕ್ಕಗೆ ಹಾಸನ ಸುರಕ್ಷಿತ ಕ್ಷೇತ್ರ ಅಲ್ಲ ಎಂದರು.
ಇನ್ನು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ. ಇವರಿಗೆ ಶುಭಕೋರಿದ ಸಿ.ಟಿ.ರವಿ, ಸಿಎಂ ಬೊಮ್ಮಾಯಿ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸುತ್ತೇನೆ. ಅವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿ ಅಂತ ಪ್ರಾರ್ಥಿಸುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Sat, 28 January 23