CT Ravi: ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಕೊಡಲು ಸಿದ್ಧ; ಸಿಟಿ ರವಿ
Bhavani Revanna: ಭವಾನಿ ಅಕ್ಕ ನಮ್ಮ ಪಾರ್ಟಿ ಅಭ್ಯರ್ಥಿಯಾಗಲೆಂದು ನನ್ನ ಮನಸ್ಸಲ್ಲಿ ಆಸೆಯಿದೆ ಎಂದು ಸಿ.ಟಿ.ರವಿ ತಿಳಿಸಿದರು.
ಚಿಕ್ಕಮಗಳೂರು: ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಿಣಿ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದರು. ಭವಾನಿ ಅಕ್ಕ ನಮ್ಮ ಪಾರ್ಟಿಯಿಂದ ಸ್ಪರ್ಧಿಸಬೇಕು ಅಂತಿದ್ದರೆ ಅವರು ಹೊಳೆನರಸೀಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿ. ಹೊಳೆನರಸೀಪುರಕ್ಕೆ ಭವಾನಿಗಿಂತ ಉತ್ತಮ ಅಭ್ಯರ್ಥಿ ಇಲ್ಲ ಎಂದು ರವಿ ಹೇಳಿದರು.
ಸಹೋದರಿ ಭವಾನಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಮನೆಯಲ್ಲಿ ಗಲಾಟೆ ಹೆಚ್ಚಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಭವಾನಿ ಅಕ್ಕ ನಮ್ಮ ಪಾರ್ಟಿ ಅಭ್ಯರ್ಥಿಯಾಗಲೆಂದು ನನ್ನ ಮನಸ್ಸಲ್ಲಿ ಆಸೆಯಿದೆ ಎಂದು ರವಿ ತಿಳಿಸಿದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನೀತಿ ಒಪ್ಪಿಕೊಂಡು ಬರುವವರು ಬರಬಹುದು. ಸುಮಲತಾ ಪ್ರಮುಖ ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದಿದ್ದಾರೆ. ಸುಮಲತಾ ಬಿಜೆಪಿ ಸೇರ್ಪಡೆಯಾದರೆ ತುಂಬಾ ಸಂತೋಷವಾಗುತ್ತದೆ. ಅದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಪಾಕಿಸ್ತಾನವೇ ಸೇಫ್
ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಹುಡುಕಾಡುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಪಾಕಿಸ್ತಾನವೇ ಉತ್ತಮ ಜಾಗ ಎಂದು ಸಿ.ಟಿ.ರವಿ ಕೆಲ ದಿನಗಳ ಹಿಂದಷ್ಟೇ ಹಾವೇರಿಯಲ್ಲಿ ವ್ಯಂಗ್ಯವಾಗಿದ್ದರು. ಪಾಕಿಸ್ತಾನದಲ್ಲಿ ಮೋದಿ, ಬೊಮ್ಮಾಯಿ, ಯಡಿಯೂರಪ್ಪ ಇರುವುದಿಲ್ಲ. ಒಳೇಟು ಕೊಡಲು ಡಿಕೆಶಿ, ಖರ್ಗೆ ಕೂಡ ಇರುವುದಿಲ್ಲ ಎಂದು ಹೇಳಿದರು.
ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿದ ಅವರು, ಕಾಂಗ್ರೆಸ್ನವರೇ ಬಿಜೆಪಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡಗು ಎಂದು ರವಿ ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಸೋನಿಯ ಗಾಂಧಿ ಬಂಡವಾಳವಾದರೆ ನಮಗೆ ಮಣ್ಣಿನ ಮಗ ಪ್ರಧಾನಿ ಮೋದಿಯವರೇ ಧೀಶಕ್ತಿ: ಸಿಟಿ ರವಿ, ಬಿಜೆಪಿ ಶಾಸಕ
ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:34 pm, Fri, 27 January 23