ಬಿಜೆಪಿ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸೈಲೆಂಟ್ ಆದ ಶಾಸಕ ಯತ್ನಾಳ್: ಯಡಿಯೂರಪ್ಪ ಬಗ್ಗೆ ಮಾತನಾಡದಂತೆ ಸೂಚನೆ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಇನ್ಮುಂದೆ ಯಡಿಯೂರಪ್ಪ ಬಗ್ಗೆ ನನಗೆ ಪ್ರಶ್ನೆ ಕೇಳಬೇಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದರು.
ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Yediyurappa) ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಹೈಕಮಾಂಡ್ ಹೇಳಿದ ತಕ್ಷಣ ನಾನು ಸಾಫ್ಟ್ ಆಗಲೇಬೇಕಲ್ಲ. ಇನ್ಮುಂದೆ ಯಡಿಯೂರಪ್ಪ ಬಗ್ಗೆ ನನಗೆ ಪ್ರಶ್ನೆ ಕೇಳಬೇಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮನವಿ ಮಾಡಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಯತ್ನಾಳ್ ಸೈಲೆಂಟ್ ಆಗಿದ್ದಾರೆ. ಯಡಿಯೂರಪ್ಪ ಬಗ್ಗೆ ನನಗೆ ಗೌರವವಿದೆ, ಅವರ ಬಗ್ಗೆ ಮಾತನಾಡಲ್ಲ. ಯಡಿಯೂರಪ್ಪ ಹಿರಿಯರಿದ್ದಾರೆ ಬೈಯ್ಯೋದು ಬೇಡ ಅಂದಿದ್ದಾರೆ. ಇನ್ಮುಂದೆ ಬಿಎಸ್ವೈ ಬಗ್ಗೆ ಮಾತಾಡಬೇಡಿ ಎಂದು ಸೂಚಿಸಿದ್ದಾರೆ. ಕೇಂದ್ರದ ಬಿಜೆಪಿ ನಾಯಕರ ಸೂಚನೆಯಂತೆ ಮಾತನಾಡುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಆಸ್ತಿ ಕಸಿದುಕೊಂಡಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಯತ್ನಾಳ್ ಹೇಳಿದರು.
ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ನೋಟಿಸ್ ಜಾರಿ
ಈ ವಿಚಾರವಾಗಿ ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿತ್ತು. ಸದ್ಯ ಈ ವಿಚಾರವಾಗಿ ಜಿಲ್ಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು. ಯಾವುದೇ ನೋಟಿಸ್ ಬಂದಿಲ್ಲ, ಸುಮ್ಮನೇ ವದಂತಿ ಹಬ್ಬಿಸಿದ್ದಾರೆ. ನನಗೆ ನೋಟಿಸ್ ಕೊಡುವಂತಹ ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು ರಾಜಕೀಯ ಮುಂದುವರಿಸುವವರ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು ಎಂದು ಹೇಳಿದ್ದರು.
ಇದನ್ನೂ ಓದಿ: ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ನೋಟಿಸ್ ವಿಚಾರ: ವದಂತಿ ಹಬ್ಬಿಸಿದ್ದಾರೆ ಎಂದ ಶಾಸಕ ಯತ್ನಾಳ್
ಇನ್ನೂ ಯಾಕೆ ನೋಟಿಸ್ ನೀಡಿಲ್ಲ ಎಂದು ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೋಹ ಹರಡಿಸುತ್ತಿದ್ದಾರೆ. ಇದೆಲ್ಲವೂ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೇ. ವಾಜಪೇಯಿ ಪ್ರಧಾನಿ ಆಗಿದ್ದಾಗಲೂ ನನಗೆ ನೋಟಿಸ್ ನೀಡಿದ್ದರು. ನೋಟಿಸ್ ನೀಡಿದ ಮೂರೇ ತಿಂಗಳಲ್ಲಿ ನಾನು ಕೇಂದ್ರ ಸಚಿವನಾಗಿದ್ದೆ ಎಂದು ಶಾಸಕ ಯತ್ನಾಳ್ ತಿಳಿಸಿದ್ದರು.
ನಾನು ಯಾವುದೇ ನೋಟಿಸ್ಗೆ ಅಂಜುವ ಮಗನಲ್ಲ
ನಾನು ಯಾವುದೇ ನೋಟಿಸ್ಗೆ ಅಂಜುವ ಮಗನಲ್ಲ. ನಿನ್ನೆ ಭಾರತೀಯ ಜನತಾ ಪಕ್ಷದ ವರಿಷ್ಠರೇ ನನ್ನ ಜತೆ ಮಾತಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ದೊಡ್ಡ ನಿರ್ಣಯ ಸಾಧ್ಯತೆಯಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಬಹಳಷ್ಟು ಬದಲಾವಣೆ ಸಾಧ್ಯತೆಯಿದೆ. ನನ್ನ ಪರವಾಗಿ ಒಳ್ಳೆಯ ನಿರ್ಣಯ ಆಗಲಿದೆ.
ಇದನ್ನೂ ಓದಿ: ಅವರ ಅಪ್ಪಂಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ: ಸಚಿವ ಮುರುಗೇಶ ನಿರಾಣಿಗೆ ಯತ್ನಾಳ್ ಸವಾಲ್
ವಿಜಯಪುರಕ್ಕೆ ಬಂದಿದ್ದಾಗ ಅರುಣ್ ಸಿಂಗ್ ನನ್ನ ಜತೆ ಮಾತಾಡಿದ್ದಾರೆ. ಅವರ ಬಳಿ ನಾನು ಮುಖ್ಯಮಂತ್ರಿ ಅಥವಾ ಮಂತ್ರಿಗಿರಿ ಕೇಳಿಲ್ಲ. ಕರ್ನಾಟಕದಲ್ಲಿ ನಾನು ಮಂತ್ರಿಗಿಂತಲೂ ಪವರ್ಫುಲ್ ಆಗಿದ್ದೀನಿ. ಎಲ್ಲಾ ಮಂತ್ರಿಗಳು ನನ್ನ ಗೆಳೆಯರಿದ್ದಾರೆ, ನನ್ನ ಮಾತು ಕೇಳುತ್ತಾರೆ. ನಾನು ಕೂಡ ಸಿಎಂ ಇದ್ದಂತೆ, ಶಾಸಕನಾಗಿಯೇ ಸಚಿವರ ಮೇಲಿದ್ದೇನೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:16 pm, Thu, 26 January 23