ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ನೋಟಿಸ್ ವಿಚಾರ: ವದಂತಿ ಹಬ್ಬಿಸಿದ್ದಾರೆ ಎಂದ ಶಾಸಕ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ಸಚಿವ ಮುರುಗೇಶ್ ನಿರಾಣಿ ನಡುವೆ ವಾಕ್ ಸಮರ ನಡೆಯುತ್ತಿರುವುದು ಗೊತ್ತಿರುವ ವಿಚಾರ ಆದರೆ ಈ ವಿಚಾರವಾಗಿ ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ.
ವಿಜಯಪುರ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಬಿಜೆಪಿ ಸಚಿವ ಮುರುಗೇಶ್ ನಿರಾಣಿ (Murugesh Nirani) ನಡುವಿನ ವಾಕ್ ಸಮರ ತಾರಕಕ್ಕೇರಿತ್ತು. ಇಬ್ಬರೂ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು. ಇದು ಬಿಜೆಪಿ ಸರ್ಕಾರಕ್ಕೂ ಮುಜುಗುರ ಉಂಟುಮಾಡಿತ್ತು. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತಾಗಿ ಜಿಲ್ಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ಯಾವುದೇ ನೋಟಿಸ್ ಬಂದಿಲ್ಲ, ಸುಮ್ಮನೇ ವದಂತಿ ಹಬ್ಬಿಸಿದ್ದಾರೆ. ನನಗೆ ನೋಟಿಸ್ ಕೊಡುವಂತಹ ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು ರಾಜಕೀಯ ಮುಂದುವರಿಸುವವರ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು ಎಂದು ಹೇಳಿದರು.
ಇನ್ನೂ ಯಾಕೆ ನೋಟಿಸ್ ನೀಡಿಲ್ಲ ಎಂದು ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೋಹ ಹರಡಿಸುತ್ತಿದ್ದಾರೆ. ಇದೆಲ್ಲವೂ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೇ. ವಾಜಪೇಯಿ ಪ್ರಧಾನಿ ಆಗಿದ್ದಾಗಲೂ ನನಗೆ ನೋಟಿಸ್ ನೀಡಿದ್ದರು. ನೋಟಿಸ್ ನೀಡಿದ ಮೂರೇ ತಿಂಗಳಲ್ಲಿ ನಾನು ಕೇಂದ್ರ ಸಚಿವನಾಗಿದ್ದೆ ಎಂದು ಶಾಸಕ ಯತ್ನಾಳ್ ತಿಳಿಸಿದರು.
ಇದನ್ನೂ ಓದಿ: ನಾಲಿಗೆ ಹರಿದು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ : ಯತ್ನಾಳ್ಗೆ, ಮುರುಗೇಶ್ ನಿರಾಣಿ ಖಡಕ್ ಎಚ್ಚರಿಕೆ
ನಾನು ಯಾವುದೇ ನೋಟಿಸ್ಗೆ ಅಂಜುವ ಮಗನಲ್ಲ
ನಾನು ಯಾವುದೇ ನೋಟಿಸ್ಗೆ ಅಂಜುವ ಮಗನಲ್ಲ. ನಿನ್ನೆ ಭಾರತೀಯ ಜನತಾ ಪಕ್ಷದ ವರಿಷ್ಠರೇ ನನ್ನ ಜತೆ ಮಾತಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ದೊಡ್ಡ ನಿರ್ಣಯ ಸಾಧ್ಯತೆಯಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಬಹಳಷ್ಟು ಬದಲಾವಣೆ ಸಾಧ್ಯತೆಯಿದೆ. ನನ್ನ ಪರವಾಗಿ ಒಳ್ಳೆಯ ನಿರ್ಣಯ ಆಗಲಿದೆ. ವಿಜಯಪುರಕ್ಕೆ ಬಂದಿದ್ದಾಗ ಅರುಣ್ ಸಿಂಗ್ ನನ್ನ ಜತೆ ಮಾತಾಡಿದ್ದಾರೆ. ಅವರ ಬಳಿ ನಾನು ಮುಖ್ಯಮಂತ್ರಿ ಅಥವಾ ಮಂತ್ರಿಗಿರಿ ಕೇಳಿಲ್ಲ. ಕರ್ನಾಟಕದಲ್ಲಿ ನಾನು ಮಂತ್ರಿಗಿಂತಲೂ ಪವರ್ಫುಲ್ ಆಗಿದ್ದೀನಿ. ಎಲ್ಲಾ ಮಂತ್ರಿಗಳು ನನ್ನ ಗೆಳೆಯರಿದ್ದಾರೆ, ನನ್ನ ಮಾತು ಕೇಳುತ್ತಾರೆ. ನಾನು ಕೂಡ ಸಿಎಂ ಇದ್ದಂತೆ, ಶಾಸಕನಾಗಿಯೇ ಸಚಿವರ ಮೇಲಿದ್ದೇನೆ ಎಂದರು.
ಅವರ ಅಪ್ಪಂಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ
ತಾಕತ್ತಿದ್ದರೆ ನಿಜವಾಗಿಯೂ ಅವರ ಅಪ್ಪಂಗೆ ಹುಟ್ಟಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಈ ಹಿಂದೆ ಯತ್ನಾಳ ಸವಾಲ್ ಹಾಕಿದ್ದರು. ನಮ್ಮ ಬಳಿಯೂ ಭಂಡಾರ ಇದೆ. ಮುರುಗೇಶ್ ನಿರಾಣಿ ಕೂಡ ಸಿಡಿ ವಿಚಾರದಲ್ಲಿ ಸ್ಟೇ ತಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಸಿಡಿ ಫ್ಯಾಕ್ಟರಿ ಇವೆ ಅಂತಾ ಹೇಳಿದ್ದೇನೆ. ಯಾರದ್ದೋ ಸಿಡಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಸಿಡಿ ಇಟ್ಟುಕೊಂಡೇ ಮಂತ್ರಿ ಆಗ್ತಾರೆ, ನಾನು ಅಂತಹ ಕೆಲಸ ಮಾಡಲ್ಲ. ಇವೆಲ್ಲಾ ಮೀಸಲಾತಿ ಹೋರಾಟದ ಮೇಲೆ ಪರಿಣಾಮ ಬೀರುವುದಿಲ್ಲ. ಯಾರು ಒಳ್ಳೆಯವರು, ಕೆಟ್ಟವರೆಂದು ಸಮಾಜದ ಜನರಿಗೆ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದರು.
ಇದನ್ನೂ ಓದಿ: ನನ್ನನ್ನು ಸೋಲಿಸಲು ನಿರಾಣಿ ಕಳಿಸುವ ದುಡ್ಡು ತೆಗೆದುಕೊಂಡು ವಿಜಯಪುರದ ಮತದಾರ ನನಗೆ ವೋಟು ಹಾಕುತ್ತಾನೆ: ಬಸನಗೌಡ ಯತ್ನಾಳ್
ಜನರು ನನಗೆ ಈತನನ್ನು ಕೇಳಿ ಮತ ಹಾಕುತ್ತಾರಾ?
ಮುಂದಿನ 2023ರ ಚುನಾವಣೆಯಲ್ಲಿ ಯತ್ನಾಳಗೆ ಟಿಕೆಟ್ ಸಿಗುತ್ತಾ ಇಲ್ವೋ ಎಂದ ಸಚಿವ ನಿರಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಜನರು ನನಗೆ ಈತನನ್ನು ಕೇಳಿ ಮತ ಹಾಕುತ್ತಾರಾ? ಆತನಿಗೆ ಬೀಳಗಿಯಲ್ಲಿ ಮತ ಹಾಕುತ್ತಾರಾ ಎಂದು ನೋಡಿಕೊಳ್ಳಲಿ. ಎಷ್ಟು ಜನ ಅಣ್ಣ ತಮ್ಮಂದಿರರು ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ನಿಂದ ನಿಲ್ಲಲಿದ್ದಾರೆ ಎಂಬುದನ್ನ ನಿರಾಣಿ ಮೊದಲು ಹೇಳಲಿ. ನಮ್ಮ ಮನೆಯಲ್ಲಿ ನಾನೊಬ್ಬನೇ ಚುನಾವಣೆಗೆ ನಿಲ್ಲುತ್ತೇನೆ ಎಂದು ನೇರವಾಗಿ ಮುರಗೇಶ ನಿರಾಣಿಗೆ ಯತ್ನಾಳ ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Mon, 16 January 23